ನ್ಯೂಯಾರ್ಕ್​ನಲ್ಲಿ ಮಧ್ಯರಾತ್ರಿ ಅಫ್ಘನ್ ಯುವತಿಗೆ ಸಹಾಯ ಮಾಡಿದ ಡ್ರೈವರ್

New York : ಪರಿಚಿತರಿಗೆ ಸಹಾಯ ಮಾಡುವುದು ಸಹಜ. ಆದರೆ ಅಪರಿಚಿತರಿಗೆ, ಅದರಲ್ಲೂ ಮಧ್ಯರಾತ್ರಿ, ಮತ್ತದರಲ್ಲೂ ಒಬ್ಬ ಪುರುಷ ಮಹಿಳೆಗೆ? ನ್ಯೂಯಾರ್ಕ್​ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಶಕುಲಾ ಜದ್ರಾನ್​ ಎಂಬ ಅಫ್ಘಾನಿಸ್ತಾನದ ವಿದ್ಯಾರ್ಥಿನಿಯ ಟ್ವೀಟ್​ ಇದೀಗ ವೈರಲ್ ಆಗುತ್ತಿದೆ. ನ್ಯೂಯಾರ್ಕ್​ನಲ್ಲಿ ಮಧ್ಯರಾತ್ರಿ ಆಕೆ ತಪ್ಪಾದ ಬಸ್​ ಹತ್ತಿದಾಗ ಅಪರಿಚಿತನಾದ ಡ್ರೈವರ್ ತನಗೆ ಹೇಗೆ ಸಹಾಯ ಮಾಡಿದ ಎಂಬುದನ್ನು ಆಕೆ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾಳೆ.

ಮಧ್ಯರಾತ್ರಿ ನ್ಯೂಯಾರ್ಕ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಅರಿವಿಗೆ ಬಂದಿದ್ದು ಮೊಬೈಲ್​ನಲ್ಲಿ ಚಾರ್ಜಿಲ್ಲ ಜೊತೆಗೆ ಜೇಬಿನಲ್ಲಿ ಹಣವೂ ಇಲ್ಲ, ಯಾವುದೇ ಥರದ ಕಾರ್ಡ್​ ಕೂಡ ಇಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಆಕೆ ಹತ್ತಿದ್ದು ತಪ್ಪಾದ ಬಸ್​! ಮುಂದೇನು ಮಾಡುವುದು ಎಂದು ಆಕೆ ಕಳವಳಕ್ಕೀಡಾದಳು. ​ಬಸ್​ ಡ್ರೈವರ್ ನೋಯಲ್​ ಬಳಿ ಆಕೆ ತನ್ನ ಸಂಕಷ್ಟವನ್ನು ತೋಡಿಕೊಂಡಳು. ಆಕೆಯನ್ನು ಈ ಒತ್ತಡದಿಂದ ಪಾರು ಮಾಡಲೇಬೇಕೆಂದು ನಿರ್ಧರಿಸಿ ಆಕೆ ವಾಸವಾಗಿದ್ದ ಪ್ರದೇಶದೆಡೆ ಬಸ್​ ತಿರುಗಿಸಿದ.

ನಂತರ ಮನೆಯನ್ನು ತಲುಪಿದ ಮೇಲೆ ಡ್ರೈವರ್​ಗೆ ಸ್ವಲ್ಪ ಹಣ ಕೊಡಲು ಮುಂದಾದಳು. ಆದರೆ ಆತ ನಿರಾಕರಿಸಿದನು. ಮತ್ತೆ ಆತ ಕೆಲ ದಿನಗಳಲ್ಲೇ ತನ್ನ ವೃತ್ತಿಯಿಂದ ನಿವೃತ್ತನೂ ಆಗುವವನಿದ್ಧಾನೆ ಎಂಬ ವಿಷಯವೂ ಆಕೆಗೆ ತಿಳಿಯಿತು. ಸಾರ್ವಜನಿಕ ಸೇವಾಕ್ಷೇತ್ರದಲ್ಲಿರುವವರು ನಿಮಗೆ ಸಹಾಯ ಮಾಡಿದಾಗ ತಪ್ಪದೇ ಧನ್ಯವಾದ ತಿಳಿಸಿ ಎಂದು ಆಕೆ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ದಯಾಮಯಿಯಾದ ಡ್ರೈವರ್​ನನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ನಿಜ, ಸಹಾಯ ಹಸ್ತ ಚಾಚುವಂಥ ಜನ ಯಾವಾಗಲೂ ಎಲ್ಲೆಡೆಯೂ ಇದ್ದೇ ಇರುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಅವನು ನಿಜವಾದ ಮನುಷ್ಯ, ಅಂಥವರು ಈ ಜಗತ್ತಿಗೆ ಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಕರುಣೆ ದಯೆವುಳ್ಳ ಈತನಿಗೆ ದೀರ್ಘಾಯಸ್ಸು ದೊರೆಯಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ.