ಬೆಂಗಳೂರು: ಆಧುನಿಕ ಜೀವನ ಶೈಲಿಯ ಒತ್ತಡಗಳ ಪರಿಹಾರಕ್ಕೆ ಯೋಗ ಸಹಕಾರಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಪ್ರಪಂಚಕ್ಕೆ ಭಾರತ ಕೊಟ್ಟ ಕೊಡುಗೆಯಾಗಿದೆ. ವಿಶ್ವದಾದ್ಯಂತ ಯೋಗಕ್ಕೆ ಮನ್ನಣೆ ಸಿಗುತ್ತಿದೆ. ಇದರ ಅಭ್ಯಾಸದಿಂದ ದೈಹಿಕ ಮಾನಸಿಕ ಆರೋಗ್ಯ ಸುಧಾರಣೆಯೊಂದಿಗೆ ಉತ್ಸಾಹ ಮೂಡಲಿದೆ ಎಂದಿದ್ದಾರೆ.
ಇಂದಿನ ಜೀವನ ಶೈಲಿಯಿಂದ ಮಧುಮೇಹ, ಬಿಪಿ, ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಯೋಗವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ನಮ್ಮ ಸರ್ಕಾರದಿಂದ ಯೋಗಕ್ಕೆ ಪ್ರೋತ್ಸಾಹ ದೊರೆಯಲಿದೆ ಎಂದಿದ್ದಾರೆ.
ಶಾಲೆಗಳು ಸೇರಿದಂತೆ ಎಲ್ಲಾ ಕಡೆ ಯೋಗಭ್ಯಾಸಕ್ಕೆ ಪ್ರೋತ್ಸಾಹವನ್ನು ಸರ್ಕಾರದ ವತಿಯಿಂದಲೂ ನೀಡಲಾಗುತ್ತದೆ. ಯುವ ಜನರು ಯೋಗದ ಮಹತ್ವವನ್ನು ಅರಿತು ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಇದರಿಂದಾಗಿ ಹಿರಿಯರು ನಮಗೆ ನೀಡಿರುವ ಕೊಡುಗೆ ಇನ್ನೂ ಬೆಳೆಯಲಿದೆ ಎಂದು ಹೇಳಿದ್ದಾರೆ.