ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಾಗಿ ವಿಶೇಷವಾಗಿ ತಯಾರಿಸಲಾದ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್‍ನ್ನು ಸೇನೆಗೆ ನೀಡಲಾಗುತ್ತಿದೆ ಎಂದು ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ನೂತನ ವಾಹನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಲಘು ಶಸ್ತ್ರಸಜ್ಜಿತ ವಿಶೇಷ ವಾಹನವಾಗಿದೆ. ಅಲ್ಲದೇ ಇದು ಹೆಚ್ಚುವರಿ ಬಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ನಮ್ಮ ದೇಶದ ಎಲ್ಲಾ ಭೂ ಭಾಗಗಳಲ್ಲಿ ಹಾಗೂ ಮರುಭೂಮಿಯಲ್ಲಿ ಕಾರ್ಯ ನಿರ್ವಹಿಸಲು ಈ ವಾಹನ ಸೂಕ್ತವಾಗಿದೆ. ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗಲು, ವಿಶೇಷ ಪಡೆಗಳ ಕ್ಷಿಪ್ರ ಕಾರ್ಯಾಚರಣೆಗಳಿಗೆ ಇದು ಸೂಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಶಸ್ತ್ರಸಜ್ಜಿತ ವಾಹನಗಳ ವೀಡಿಯೊವನ್ನು ಹಂಚಿಕೊಂಡಿರುವ ಆನಂದ್ ಮಹಿಂದ್ರಾ ಅವರು, ವಾಹನದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ನಮ್ಮ ಸೇನೆಗಾಗಿ ಹೆಮ್ಮೆಯಿಂದ ನಿರ್ಮಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸುಖವಿಂದರ್ ಹೇಯರ್ ಅವರ ತಂಡ ಈ ವಾಹನವನ್ನು ಯಶಸ್ವಿಯಾಗಿ ಸಿದ್ಧಪಡಿಸಿದೆ. ಈ ಮೂಲಕ ದೇಶದ ಭದ್ರತಾ ವ್ಯವಸ್ಥೆಗೆ ಸಂಸ್ಥೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದಿದ್ದಾರೆ.