ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ವರದಿಯಾಗಿದೆ. ಮಹಿಳೆಯ ಮೇಲೆ ಕಾಮುಕರ ಗುಂಪೊಂದು ಅತ್ಯಾಚಾರ ಎಸಗಿದ ಹೇಯ ಕೃತ್ಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕಾಮುಕರನ್ನ ಎರಡೇ ಗಂಟೆಯಲ್ಲಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಸತೀಶ್ ಕುಮಾರ್ (35), ವಿನೋದ್ ಕುಮಾರ್ (38), ಮಂಗಲ್ ಚಂದ್ ಮೀನಾ (33) ಮತ್ತು ಜಗದೀಶ್ ಚಂದ್ (37) ಬಂಧಿತ ಆರೋಪಿಗಳಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ವಿವರ:
ತಡರಾತ್ರಿ 12.30 ರ ವೇಳೆಗೆ ಈ ಘಟನೆ ನಡೆದಿದೆ. ರೈಲ್ವೆಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ ವ್ಯಕ್ತಿಯೊಬ್ಬ ಮಹಿಳೆಯ ಸಂಪರ್ಕಕ್ಕೆ ಬಂದಿದ್ದಾನೆ. ಇನ್ನು ಆರೋಪಿ ತನ್ನನ್ನು ಭೇಟಿ ಮಾಡುವಂತೆ ಮಹಿಳೆಯಲ್ಲಿ ಕೇಳಿಕೊಂಡಿದ್ದ. ಬಳಿಕ ಆಕೆಯನ್ನು ವಿದ್ಯುತ್ ನಿರ್ವಹಣಾ ಕೋಣೆಗೆ ಎಳೆದೊಯ್ದು ಇಬ್ಬರು ಪುರುಷರು ಅತ್ಯಾಚಾರ ಎಸಗಿದ್ದಾರೆ. ಇನ್ನಿಬ್ಬರು ಹೊರಗಿನಿಂದ ಕೊಠಡಿಯನ್ನು ಕಾಯುವ ಮೂಲಕ ನೀಚ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ನಾಲ್ವರೂ ಆರೋಪಿಗಳು ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.