ಜಿಎಸ್‌ಟಿ ವಂಚಕರ ವಿರುದ್ಧ ಪೊಲೀಸ್‌ ಕ್ರಮ: ಸಚಿವ ಎಚ್‌.ಕೆ.ಪಾಟೀಲ್‌

ಬೆಂಗಳೂರು(ಜೂ.17):  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಕರ ವಿರುದ್ಧ ಐಪಿಸಿ ಕಾಯ್ದೆಯಡಿ ಪೋಲೀಸ್‌ ಕ್ರಮ ಕೈಗೊಳ್ಳಲು ಕೂಡ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳನ್ನು ತರಲು ಕೇಂದ್ರ ಮುಂದಾಗಿದೆ. ಈ ವೇಳೆ ಜಿಎಸ್‌ಟಿ ವಿಚಾರದಲ್ಲಿ ರಾಜ್ಯಕ್ಕಿರುವ ಆತಂಕಗಳನ್ನು ಪರಿಗಣಿಸುವಂತೆ ಕೇಂದ್ರಕ್ಕೆ ವಿವರಿಸಿದ್ದೇವೆ. ಪ್ರಸ್ತುತ ಜಿಎಸ್‌ಟಿ ಪಾವತಿದಾರರು ವಂಚನೆ ಮಾಡಿರುವುದು ಖಚಿತವಾದರೆ ಅವರ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಇಂತವರ ವಿರುದ್ಧ ಐಪಿಸಿ ಕಾಯ್ದೆಯಡಿ ಪೊಲೀಸ್‌ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಶಿಫಾರಸು ಮಾಡಿದ್ದೇವೆ. ಇದರಿಂದ ಜಿಎಸ್‌ಟಿ ವಂಚಿಸುವುದನ್ನು ತಡೆಯಲು ಸಹಕಾರಿಯಾಗಲಿದೆ ಎಂದರು.

ಪ್ರಸ್ತುತ ವರ್ತಕರು ಜಿಎಸ್‌ಟಿ ಪಾವತಿಸಿದ್ದಾರಾ, ಇಲ್ಲಾವಾ? ಪಾವತಿಸಿದ್ದರೆ ಎಷ್ಟುಪಾವತಿ ಮಾಡಿದ್ದಾರೆ? ಎಂಬುದನ್ನು ತಿಳಿಯಲು ಆರ್‌ಟಿಐನಡಿ ಅರ್ಜಿ ಹಾಕಿ ಮಾಹಿತಿ ಪಡೆಯಬೇಕಾಗಿದೆ. ಇದನ್ನು ಬದಲಿಸಿ ಪ್ರತಿ ವರ್ತಕರ ಜಿಎಸ್‌ಟಿ ಮಾಹಿತಿ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ. ಇದನ್ನು ತಿದ್ದುಪಡಿಯಲ್ಲಿ ಪರಿಗಣಿಸಬೇಕು ಎಂದು ಕೋರಲಾಗಿದೆ. ಅದೇ ರೀತಿ ಜಿಎಸ್‌ಟಿ ಪಾವತಿ ಮಾಡುವುದೂ ಸೇರಿದಂತೆ ಹಲವು ವಿಷಯಗಳು ಜಿಎಸ್‌ಟಿ ನಿಯಮಾವಳಿಯ ವ್ಯಾಪ್ತಿಯಲ್ಲಿವೆ. ಆದರೆ ಇದು ಕಾಯ್ದೆಯ ರೂಪದಲ್ಲಿರಬೇಕು ಎಂಬುದು ನಮ್ಮ ನಿಲುವು. ಈ ಬಗ್ಗೆಯೂ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.