ನವದೆಹಲಿ (ಜೂ.16): ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್‌ಜೊಯ್ ಚಂಡಮಾರುತ ಗುಜರಾತ್‌ನ ಕಛ್ ಬಳಿ ಇರುವ ಜಕಾವು ಬಂದರಿಗೆ ಅಪ್ಪಳಿಸಿದೆ. ಪರಿಣಾಮವಾಗಿ ಭೂಕುಸಿತ ಸಂಭವಿಸಿದೆ. ಈವರೆಗೆ ಇಬ್ಬರು ಮೃತಪಟ್ಟು 23 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಬಿಪರ್‌ಜೋಯ್ ಚಂಡಮಾರುತ ಪರಿಣಾಮ ಗುಜರಾತ್‌ನ ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸುವ ಸುಮಾರು 99 ರೈಲುಗಳನ್ನು ರದ್ದು ಮಾಡಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ. ಅತ್ಯಂತ ತೀವ್ರವಾದ ಚಂಡಮಾರುತ ‘ಬಿಪರ್‌ಜೋಯ್’ ನಿಂದಾಗಿ ಭೂಕುಸಿತ ಪ್ರಕ್ರಿಯೆಯು ಪ್ರಾರಂಭವಾಗಿ ಇದು ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯ ದೃಷ್ಟಿಯಿಂದ ಜೂನ್ 18 ರವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ 99 ರೈಲುಗಳನ್ನು ರದ್ದುಗೊಳಿಸಲಾಗಿದೆ, 39 ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಟ್ವೀಟ್ ಮಾಡಿದ್ದಾರೆ.