ಪ್ರೀತಿಸಿದವನ ಜೊತೆ ಮದುವೆಯಾಗಲು ಬಿಡದ ತಂದೆಯಿಂದ ಆತ್ಮಹತ್ಯೆಗೆ ಪ್ರಚೋದನೆ; ಮಗಳು ಸಾವನ್ನಪ್ಪಿದ 7 ದಿನದ ಬಳಿಕ ಸತ್ಯಾಂಶ ಬೆಳಕಿಗೆ

ತುಮಕೂರು: ಪ್ರೀತಿಸಿ ಮದುವೆಯಾಗುವುದಕ್ಕೆ ಮುಂದಾಗಿದ್ದ ಮಗಳನ್ನು ತಂದೆ, ಸಹೋದರ, ಚಿಕ್ಕಪ್ಪ ಸೇರಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಜಿಲ್ಲೆಯ ಗುಬ್ಬಿತಾಲೂಕಿನ ಚಿಕ್ಕಹೆಡಿಗೇಹಳ್ಳಿಯಲ್ಲಿ ಕೇಳಿಬಂದಿದೆ. ಇದೇ ಜೂನ್​.9 ರಂದು ಮನೆಯಲ್ಲಿಯೇ ವಿಷ ಸೇವಿಸಿ ನೇತ್ರಾವತಿ (17) ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನು ಈ ಕುರಿತು ತನಿಖೆ ಆರಂಭಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಪರಿಶಿಷ್ಟ ಜನಾಂಗದ ನೇತ್ರಾವತಿ, ಲಮಾಣಿ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದಳು. ಇದಕ್ಕೆ ವಿರೋಧಿಸಿದ ತಂದೆ ಪರಶುರಾಮ, ಸಹೋದರ ಶಿವರಾಜು, ಚಿಕ್ಕಪ್ಪ ತುಕಾರಾಂ ಅವರು ಮದುವೆಯಾಗುತ್ತಿಯ ಎಂದು ಆಕೆಯನ್ನ ನಿಂದಿಸಿ ವಿಷ ಕುಡಿ, ನೇಣು ಹಾಕಿಕೊ ಎಂದು ಪ್ರಚೋದಿಸುತ್ತಿದ್ದರಂತೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ಸತ್ಯಾಸತ್ಯತೆ ಬಹಿರಂಗವಾಗಿದ್ದು, ಮೂವರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ.