ಮುಂಬೈ(ಜೂ.15) ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಬೆದರಿಕೆ ಕರೆ ಭಾರಿ ಜಟಾಪಟಿಗೆ ಕಾರಣವಾಗಿತ್ತು. ಸಂಜಯ್ ರಾವತ್ ಹಾಗೂ ಸಹೋದರ ಸುನಿಲ್ ರಾವತ್‌ಗೆ ಬಂದಿದ್ದ ಕೊಲೆ ಬೆದರಿಕೆ ಪ್ರಕರಣದ ಅಸಲಿಯತ್ತು ಹೊರಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಮಾಹಿತಿಗಳು ಹೊರಬಂದಿದೆ. ಸಂಜಯ್ ರಾವತ್ ಭದ್ರತೆ ಹೆಚ್ಚಿಸಲು ಮಾಡಿದ ನಕಲಿ ಬೆದರಿಕೆ ಕರೆ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. ಬೆದರಿಕೆ ಕರೆ ಮಾಡಿದ ಆರೋಪಿಗಳು ಸಂಜಯ್ ರಾವತ್ ಸಹೋದರ ಸುನಿಲ್ ರಾವತ್ ಆಪ್ತರಾಗಿದ್ದಾರೆ. ಆಪ್ತರಿಂದಲೇ ಕರೆ ಮಾಡಿಸಿ ಮಹಾರಾಷ್ಟ್ರದಲ್ಲಿ ಹೈಡ್ರಾಮ ಸೃಷ್ಟಿಸಲು ಮುಂದಾಗಿದ್ದ ಕೆಳಮಟ್ಟದ ರಾಜಕಾರಣ ಇದೀಗ ಬಟಾ ಬಯಲಾಗಿದೆ.
ಸಂಜಯ್ ರಾವತ್ ಹಾಗೂ ಸಹೋದರ ಸುನಿಲ್ ರಾವತ್ ಇತ್ತೀಚೆಗೆ ಮುಂಬೈ ಪೊಲೀಸರಿಗೆ ತಮಗೆ ಬಂದಿರುವ ಬೆದರಿಕೆ ಕರೆ ಕುರಿತು ದೂರು ದಾಖಲಿಸಿದ್ದರು.ಸಂಜಯ್ ರಾವತ್ ಜೊತೆಗೆ ತಮ್ಮನ್ನೂ ಮುಗಿಸುತ್ತೇವೆ ಎಂದು ಬೆದರಿಕೆ ಕರೆಗಳು ಬರುತ್ತಿದೆ ಎಂದು ಸುನಿಲ್ ರಾವತ್ ದೂರಿನಲ್ಲಿ ಹೇಳಿದ್ದರು. ಹೀಗಾಗಿ ತಮಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ದೂರು ನೀಡಿದ್ದರು.