ಅಕ್ಕಿ ರಾಜಕೀಯ ಜಟಾಪಟಿ ನಡುವೆ ಖುದ್ದು ಪ್ರಧಾನಿ ಮೋದಿ ಭೇಟಿಗೆ ಮುಂದಾದ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಅನ್ನಭಾಗ್ಯಕ್ಕೆ ಇದೀಗ ಅಕ್ಕಿ ಕೊರತೆ ಎದುರಾಗಿದೆ. ಅಕ್ಕಿ ಪೂರೈಕೆ ಮಾಡದಂತೆ ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಬಿಜೆಪಿ ನಾಯಕರು ಸಹ ಗರಂ ಆಗಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಅಕ್ಕಿ ಪಾಲಿಟಿಕ್ಸ್ ಜೋರಾಗಿದ್ದು, ಇದರ ನಡುವೆ ಖುದ್ದು ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.

ಹೈಕಮಾಂಡ್‌ ಭೇಟಿಗಾಗಿ ಜೂ.21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ. ಇದೇ ವೇಳೆ ಭೇಟಿಗೆ ಅವಕಾಶ ಸಿಕ್ಕರೆ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನೂ ಭೇಟಿಯಾಗಿ ಬರಲಿದ್ದಾರೆ. ಸೌಜನ್ಯ ಭೇಟಿ ವೇಳೆ ರಾಜ್ಯದ ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆಯಿದೆ. ಅದರಲ್ಲೂ ಮುಖ್ಯವಾಗಿ ಅನ್ನಭಾಗ್ಯಕ್ಕೆ ನೀಡುವ ಅಕ್ಕಿ ಬಗ್ಗೆ ಚರ್ಚೆ ನಡೆಸಲಿದ್ದು, ರಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.  ಆದ್ರೆ,  ಇನ್ನು ಈವರೆಗೂ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳ ಕಚೇರಿಯಿಂದ ಅಧಿಕೃತ ಭೇಟಿ ಬಗ್ಗೆ ಸಮಯವಕಾಶದ ಬಗ್ಗೆ ಮಾಹಿತಿ ಬಂದಿಲ್ಲ. ಅವಕಾಶ ದೊರೆತ ತಕ್ಷಣ ಭೇಟಿ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಅನ್ನಭಾಗ್ಯ ಯೋಜನೆ ಜಾರಿಗಾಗಿ ತಿಂಗಳಿಗೆ 2 ಲಕ್ಷದ 28 ಸಾವಿರ ಮೆಟ್ರಿಕ್​ ಟನ್ ಹೆಚ್ಚುವರಿ​ ಅಕ್ಕಿ ಬೇಕು. ಹೆಚ್ಚುವರಿ ಅಕ್ಕಿ ಪಡೆಯಲು ರಾಜ್ಯ ಸರ್ಕಾರ ಕೇಂದ್ರದ ಮೊರೆ ಹೋಗಿತ್ತು. ಜೂನ್‌ 12 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಎಫ್‌ಸಿಐ ಹೆಚ್ಚುವರಿ ಅಕ್ಕಿ ಕೊಡುವುದಾಗಿ ಹೇಳಿತ್ತಂತೆ. ಆದ್ರೆ ಈಗ ಉಲ್ಟಾ ಹೊಡೆಯುತ್ತಿದೆ ಅಕ್ಕಿ ಪೂರೈಕೆ ಮಾಡದಂತೆ ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಸಹ ಗರಂ ಆಗಿದ್ದು, ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಈ ಅಕ್ಕಿ ಗಲಾಟೆ ನಡುವೆ ಖುದ್ದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಹೆಚ್ಚುವರಿ ಅಕ್ಕಿ ನೀಡುವಂತೆ ಮನವಿ ಮಾಡಲಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಅವರು ಏನು ಹೇಳಲಿದ್ದಾರೆ ಎನ್ನುವುದು ಕುತೂಃಲ ಮೂಡಿಸಿದೆ.