ಬೆಂಗಳೂರು: ಬಸ್ ಪ್ರಯಾಣಿಕನಿಂದ 5 ಲಕ್ಷ ರೂಪಾಯಿ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಕೆಎಸ್ಆರ್ಟಿಸಿ ಸಿಬ್ಬಂದಿ ಬೆನ್ನಟ್ಟಿ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೂನ್ 14 ರಂದು ಈ ಘಟನೆ ನಡೆದಿದ್ದು, ಸದ್ಯ ಸಿಬ್ಬಂದಿಯ ಸಾಹಸ ಕಾರ್ಯಕ್ಕೆ ಸಾರ್ವಜನಿಕರಿಂದ ಮಾತ್ರವಲ್ಲದೆ, ಸಾರಿಗೆ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೆಂಗಳೂರಿನಿಂದ ತಿರುನಲ್ಲಾರ್ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಮಾಡುತ್ತಿತ್ತು. ಈ ವೇಳೆ ಊಟಕ್ಕೆಂದು ಹೊಟೇಲ್ ಬಳಿ ನಿಲ್ಲಿಸಲಾಗಿತ್ತು. ಅದರಂತೆ, ಆಸನ ಸಂಖ್ಯೆ 29-30 ರಲ್ಲಿ ಕುಳಿತಿದ್ದ ತಿರುಮುರುಗನ್ ಮತ್ತು ಅವರ ಪತ್ನಿ ಊಟಕ್ಕಾಗಿ ಕೆಳಗಿಳಿದ್ದರು. ಇದನ್ನು ಗಮನಿಸಿದ ಆಸನ ಸಂಖ್ಯೆ 17 -18 ರಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಅವರ ಬ್ಯಾಗ್ನಲ್ಲಿದ್ದ 5 ಲಕ್ಷ ಮೊತ್ತವನ್ನು ಕಳವು ಮಾಡಿದ್ದಾರೆ. ಬಸ್ ಹೊರಟು ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ತಲುಪುತ್ತಿದ್ದಂತೆ ಇಳಿದು ಓಡಲು ಪ್ರಾರಂಭಿಸಿದ್ದಾನೆ.
ಇದನ್ನು ಗಮನಿಸಿದ ಬಸ್ ಚಾಲಕ ಮಂಜುನಾಥ್ ಹಾಗೂ ಚಾಲಕ ಕಂ ನಿರ್ವಾಹಕ ಸೋಮಪ್ಪ ಟಿ. ಎನ್. ಅವರು ಓಡುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಹಣ ಪತ್ತೆಯಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ಒಪ್ಪಿಸಿ ಶೌರ್ಯ ಮೆರೆದಿದ್ದಾರೆ. ಇತ್ತ ಹಣ ಕಳೆದುಕೊಂಡಿದ್ದ ತಿರುಮುರುಗನ್ ತಮ್ಮ ಹಣ ತಮಗೆ ಸಿಕ್ಕ ಕುರಿತು ಅತೀವ ಸಂತಸ ವ್ಯಕ್ತಪಡಿಸಿ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಇ-ಮೇಲ್ ಕಳುಹಿಸಿದ್ದಾರೆ.
ಈ ಘಟನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರವ ವಿ. ಅನ್ಬುಕುಮಾರ್, ಸಿಬ್ಬಂದಿಗಳ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಮತ್ತು ಪ್ರಯಾಣಿಕರ ಬಗೆಗಿನ ಕಾಳಜಿಯು ಪ್ರಶ್ನಾತೀತ. ಇಂತಹ ಸಿಬ್ಬಂದಿಗಳೇ ನಮ್ಮ ಸಂಸ್ಥೆಯ ಹೆಮ್ಮೆ ಮತ್ತು ಗೌರವ. ಇವರ ಈ ಕಾರ್ಯವು ಇತರರಿಗೆ ಮಾದರಿಯಾಗಲಿ ಎಂದು ಆಶಿಸಿ ಇವರ ಸಮಯೋಚಿತ ಸೇವಾ ಕಾರ್ಯಕ್ಕೆ ಹರ್ಷವನ್ನು ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಈ ಬಗ್ಗೆ ನಿಗಮವು ಮಾಧ್ಯಮ ಪ್ರಕಟಣೆ ಹೊರಡಿಸಿದೆ.