ಜೂನ್ 20ರಂದು ಅಮೆರಿಕಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರ ವೇಳಾಪಟ್ಟಿ ಹೀಗಿದೆ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 20 ರಂದು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ವಿಶ್ವಸಂಸ್ಥೆಯ ಸೆಕ್ರೆಟರಿಯೇಟ್‌ನಲ್ಲಿ ಯೋಗ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವು ಅಂತರರಾಷ್ಟ್ರೀಯ ಯೋಗ ದಿನವನ್ನು ನಿಜವಾಗಿಯೂ ಸ್ವೀಕರಿಸಿದೆ ಎಂದು ಯುಎನ್ ರೆಸಿಡೆಂಟ್ ಭಾರತದಲ್ಲಿನ ಸಂಯೋಜಕರಾದ ಶೋಂಬಿ ಶಾರ್ಪ್ ನಿನ್ನೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರ. ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿರುವುದೇ ವಿಶೇಷ ಎಂದು ಶಾರ್ಪ್ ಹೇಳಿದ್ದಾರೆ. ನಂತರ ಪ್ರಧಾನಿ ವಾಷಿಂಗ್ಟನ್ ಡಿಸಿಗೆ ತೆರಳಲಿದ್ದಾರೆ.

ಜೂನ್ 22 ರಂದು ಬೆಳಗ್ಗೆ ಪ್ರಧಾನಿ ಮೋದಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ನಂತರ ಅವರ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎರಡು ದೇಶಗಳ ನಡುವಿನ ತಂತ್ರಜ್ಞಾನ ಪಾಲುದಾರಿಕೆ, ರಕ್ಷಣೆ ಮತ್ತು ಹವಾಮಾನ ಬದಲಾವಣೆ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ಮಧ್ಯಾಹ್ನ ಮೋದಿವರು ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ 2016ರಲ್ಲಿ ಮೋದಿ ಇಲ್ಲಿ ಮಾತನಾಡಿದ್ದರು.

ರಾತ್ರಿ ಶ್ವೇತಭವನದಲ್ಲಿ ಬೈಡನ್ ಆಯೋಜಿಸಿದ ಭರ್ಜರಿ ಭೋಜನದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಪ್ರಮುಖ ಅಮೆರಿಕನ್ನರು ಮತ್ತು ಭಾರತೀಯ-ಅಮೆರಿಕನ್ನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.