ದಿವಾಳಿಯಾದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಯುಬಿಎಸ್ ತೆಕ್ಕೆಗೆ; ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೊಸ ಗ್ರಾಹಕರು ಬೇಡ ಎಂದ ಯುಬಿಎಸ್

ವಿಶ್ವದ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿರುವ ಯುಬಿಎಸ್ ಎಜಿ  ದಿವಾಳಿಯಂಚಿನಲ್ಲಿದ್ದ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು  ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ. ಶನಿವಾರ ತುರ್ತಾಗಿ ಕ್ರೆಡಿಟ್ ಸ್ವೀಸ್ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭವಾಗಿತ್ತು. ಸೋಮವಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ವೇಳೆ ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಕಾರ್ಯಚಟುವಟಿಕೆ ಮತ್ತು ವ್ಯವಹಾರದಲ್ಲಿ ಗಣನೀಯವಾದ ಬದಲಾವಣೆ ತರಲು ಹೊರಟಿದೆ ಯುಬಿಎಸ್. ಕ್ರೆಡಿಟ್ ಸ್ವೀಸ್ ಬ್ಯಾಂಕರ್​ಗಳ (ಸಿಬ್ಬಂದಿ) ಮೇಲೆ ಬಿಗಿ ನಿರ್ಬಂಧಗಳನ್ನು ಹಾಕಲು ನಿರ್ಧರಿಸಲಾಗಿದೆ. ರಷ್ಯಾ ಇತ್ಯಾದಿ ಹೈ ರಿಸ್ಕ್ ಎಂದು ಪರಿಗಣಿಸಲಾದ ದೇಶಗಳಿಂದ ಹೊಸ ಗ್ರಾಹಕರನ್ನು ತರದಂತೆ ನಿಷೇಧ ಕೂಡ ಹೇರಲು ಯುಬಿಎಸ್ ಯೋಜಿಸಿದೆ. ಇದೂ ಸೇರಿದಂತೆ 20ಕ್ಕೂ ನಿರ್ಬಂಧಗಳ ಪಟ್ಟಿಯನ್ನು ಇಟ್ಟುಕೊಂಡು ಯುಬಿಎಸ್ ಕಾಯುತ್ತಿದೆ. ಈ ಬಗ್ಗೆ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವಿವರವಾದ ವರದಿ ಪ್ರಕಟವಾಗಿದೆ.

ನಷ್ಟದಲ್ಲಿರುವ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಖರೀದಿಸಿದರೆ ಭಾರೀ ಹೊರೆಯಾದೀತೆಂದು ಯಾರೂ ಕೂಡ ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ. ಯುಬಿಎಸ್ ಸಂಸ್ಥೆ ಕೂಡ ಹಿಂದೆ ಮುಂದೆ ನೋಡಿತ್ತು. ಭಾರೀ ದೊಡ್ಡ ಇತಿಹಾಸ ಇರುವ ಕ್ರೆಡಿಟ್ ಸ್ವೀಸ್ ದಿವಾಳಿಗೊಂಡ ಇತಿಹಾಸಪುಟ ಸೇರುವುದನ್ನು ತಪ್ಪಿಸಲು ಸ್ವಿಟ್ಚರ್​ಲೆಂಡ್ ಸರ್ಕಾರ ಪ್ರಯತ್ನಿಸಿ, ಯುಬಿಎಸ್ ಎಜಿ ಜೊತೆ ಸಂಧಾನ ನಡೆಸಿತು. ಈ ರಾಜಿ ಪ್ರಕಾರ ಕ್ರೆಡಿಟ್ ಸ್ವೀಸ್ ಸಂಸ್ಥೆಯನ್ನು ಖರೀದಿಸುವುದರಿಂದ ಯುಬಿಎಸ್​ಗೆ ಎದುರಾಗುವ ನಷ್ಟದಲ್ಲಿ ಸುಮಾರು 9 ಬಿಲಿಯನ್ ಸ್ವಿಸ್ ಫ್ರಾಂಕ್ (ಸುಮಾರು 82,000 ಕೋಟಿ ರೂ) ನಷ್ಟಭರಿಸಿಕೊಡುವುದಾಗಿ ಸ್ವಿಸ್ ಸರ್ಕಾರ ಭರವಸೆ ನೀಡಿದೆ. ಇದರೊಂದಿಗೆ ಯುಬಿಎಸ್ ಹೆಚ್ಚು ಆತಂಕ ಇಲ್ಲದೇ ಕ್ರೆಡಿಟ್ ಸ್ವೀಸ್ ಅನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ.