ನವದೆಹಲಿ: ವಿಮಾನದಲ್ಲಿ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಬಾಂಬ್ ಕುರಿತು ಸಂಭಾಷಣೆ ಮಾಡಿದ್ದಕ್ಕೆ ಆತನನ್ನು ಬಂಧಿಸಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಜೀಂ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಸ್ತಾರ ವಿಮಾನ ಸಂಖ್ಯೆ ಯುಕೆ-981ರಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಆತ ತನ್ನ ಫೋನ್‌ನಲ್ಲಿ ಬಾಂಬ್ ಕುರಿತು ಮಾತನಾಡುತ್ತಿದ್ದ. ಇದನ್ನು ಸಹ ಪ್ರಯಾಣಿಕರೊಬ್ಬರು ಕೇಳಿಸಿಕೊಂಡಿದ್ದಾರೆ.
ಆರೋಪಿ ಬಾಂಬ್ ಕುರಿತು ವಿಮಾನದಲ್ಲಿ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ತಕ್ಷಣ ವಿಮಾನದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸಿಬ್ಬಂದಿ ಆರೋಪಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಹಸ್ತಾಂತರಿಸಿದ್ದಾರೆ.
ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಫೋನ್‌ನಲ್ಲಿ ಆತ ಬಾಂಬ್ ಕುರಿತು ಸಂಭಾಷಣೆ ಮಾಡುತ್ತಿದ್ದುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.