ಮೊಬೈಲ್ ಕೊಡುವುದಾಗಿ ಪ್ರೇಯಸಿಯನ್ನು ಪುಸಲಾಯಿಸಿ ರೂಮ್ಗೆ ಕರೆದುಕೊಂಡು ಹೋದ ಪ್ರಿಯಕರ ತನ್ನ ಸ್ನೇಹಿತನೊಂದಿಗೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು: ಯುವತಿ ಮೇಲೆ ಸ್ನೇಹಿತರಿಂದ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಯುವತಿ ಮೇಲೆ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಜೂನ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಿರಿನಗರ ಪೊಲೀಸರು ಸದ್ಯ ಪುರುಷೋತ್ತಮ್ ಹಾಗು ಚೇತನ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಮೊಬೈಲ್ ಕೊಡುತ್ತೇನೆಂದು ಪುರುಷೋತ್ತಮ್ , ತನ್ನ ಪ್ರೇಯಸಿಯನ್ನು ಪುಸಲಾಯಿಸಿ ರೂಮ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.
ಪುರುಷೋತ್ತಮ್ ಹಾಗೂ ಯುವತಿ ಮೂಲತಃ ಇಬ್ಬರೂ ತುಮಕೂರು ಜಿಲ್ಲೆ ಕೊರಟಗೆರೆ ಮೂಲದವರಾಗಿದ್ದು, ಕಳೆದ 1 ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವಾರ ಅಷ್ಟೇ ಪುರುಷೋತ್ತಮ್ ಪ್ರೇಯಸಿಯನ್ನು ಬೇಟಿಯಾಗಿ ಮೊಬೈಲ್ ಪಡೆದುಕೊಂಡಿದ್ದ. ಬಳಿಕ 2 ದಿನಗಳ ಹಿಂದೆ ಯುವತಿ ಪುರುಷೋತ್ತಮ್ ಗೆ ಕರೆ ಮಾಡಿ ಮೊಬೈಲ್ ಕೇಳಿದ್ದಳು. ಸರಿ ಮೆಜೆಸ್ಟಿಕ್ಗೆ ಬಾ ಮೊಬೈಲ್ ಕೊಡುತ್ತೇನೆ ಎಂದಿದ್ದ. ಅದರಂತೆ ಯುವತಿ ಜೂನ್ 6ರಂದು ಬೆಂಗಳೂರಿನ ಮೆಜೆಸ್ಟಿಕ್ಗೆ ಬಂದಿದ್ದಳು. ನಂತರ ಗಿರಿನಗರದ ಈರಣ್ಣಗುಡ್ಡೆಯ ಸ್ನೇಹಿತನ ರೂಮ್ಗೆ ಕರೆದೊಯ್ದಿದ್ದ. ಈ ವೇಳೆ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕೆಂದು ಯುವತಿ ಹೇಳಿದ್ದಾಳೆ. ಆದ್ರೆ, ಪುರುಷೋತ್ತಮ್ ಮೊಬೈಲ್ ನೀಡದೆ ಸತಾಯಿಸಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಂತರ ರೂಮ್ಗೆ ಬಂದಿದ್ದ ಸ್ನೇಹಿತ ಚೇತನ್ ಸಹ ಯುವತಿ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಯುವತಿ ಚೀರಾಟ ಕೇಳಿ ಅಕಪಕ್ಕದ ಮನೆಯವರು ಜಮಾವಣೆಗೊಂಡು ಗಿರಿನಗರ ಠಾಣೆ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಯುವತಿಯನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ತನಿಖೆ ನಡೆಸಿದ್ದಾರೆ.