ಕಾಲೇಜು ವಿದ್ಯಾರ್ಥಿನಿ ಹಾಸ್ಟೆಲ್​ನ ಕೊಠಡಿಯಲ್ಲಿ ಶವವಾಗಿ ಪತ್ತೆ, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ

ಮುಂಬೈ :– ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್​ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 30 ವರ್ಷದ ಶಂಕಿತ ಆರೋಪಿಯನ್ನು ಓಂ ಪ್ರಕಾಶ್ ಕನೌಜಿಯಾ ಎಂದು ಗುರುತಿಸಲಾಗಿದ್ದು, ಹಾಸ್ಟೆಲ್ ಆವರಣದಿಂದ ತಲೆಮರೆಸಿಕೊಂಡಿದ್ದಾನೆ. ಶಂಕಿತ ಆರೋಪಿ ದಕ್ಷಿಣ ಮುಂಬೈನ ಪೊಲೀಸ್ ಜಿಮ್ಖಾನಾ ಬಳಿ ಇರುವ ಸಾವಿತ್ರಿ ಫುಲೆ ಮಹಿಳಾ ಹಾಸ್ಟೆಲ್‌ನಲ್ಲಿ 15 ವರ್ಷಗಳಿಂದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಮೆರೈನ್ ಡ್ರೈವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಮೃತ ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಶವಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆ ಬಾಂದ್ರಾ ಉಪನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿನಿ. ಕೋಣೆಗೆ ಪ್ರವೇಶಿಸಿದ ಪೊಲೀಸ್ ತಂಡವು ಸಂತ್ರಸ್ತೆ ಕುತ್ತಿಗೆಗೆ ದುಪ್ಪಟ್ಟಾ ಸುತ್ತಿಕೊಂಡು ಸತ್ತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಹಾಸ್ಟೆಲ್​ ಹೊರಗಡೆಯಿಂದ ಕೊಠಡಿಗೆ ಬೀಗ ಹಾಕಲಾಗಿತ್ತು, ಹೀಗಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೆಚ್ಚುವರಿ ಆಯುಕ್ತ ಅಭಿನವ್ ದೇಶಮುಖ್ ಹೇಳಿದ್ದಾರೆ.