ಬೆಂಗಳೂರು: ನೂತನ ಸಿದ್ದರಾಮಯ್ಯ ಸರ್ಕಾರ(Siddaramaiah) ರಚನೆಯಾಗಿ ಎರಡು ದಿನ ಕಳೆದಿದೆ. ಇದರ ನಡುವೆ ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ(Bengaluru Rain). ಜನ ಬಿಬಿಎಂಪಿ(BBMP), ರಾಜ್ಯ ಸರ್ಕಾರವನ್ನು ದೂರುತ್ತಿದ್ದಾರೆ(State Government). ಸದ್ಯ ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು(Basavaraj Bommai) ನೂತನ ಸಿಎಂ ಸಿದ್ದರಾಮಯ್ಯನವರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಭಾರಿ ಮಳೆಗೆ ಬೆಂಗಳೂರು ನಗರದ ಹಲವೆಡೆ ಹಾನಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡ ರಚಿಸಿದ್ದೆವು. ಈ ತಂಡಗಳಿಗೆ ಚಾಲನೆ ಕೊಟ್ಟು ಕಾರ್ಯಕ್ಕೆ ನಿಯೋಜಿಸಬೇಕು. ಇನ್ನೂ 5 ದಿನ ಮಳೆ ಆಗುತ್ತೆ, ಪರಿಹಾರ ಕ್ರಮ ಕೈಗೊಳ್ಳಬೇಕು. ಮಳೆಗೆ ಬೆಂಗಳೂರು ನಗರದ ಹಲವೆಡೆ ಮರಗಳು ಧರೆಗುರುಳಿವೆ. ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಪರಿಹಾರ ಕ್ರಮಕ್ಕೆ ಮುಖ್ಯಮಂತ್ರಿಗಳು ಆದ್ಯತೆ ನೀಡಬೇಕು. ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡುವವರು ಮಾಡ್ತಾರೆ, ಮಾಡದಿರುವವರು ಮಾಡಲ್ಲ, ಪ್ಲಾನ್ ಪ್ರಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನೂತನ ಸಿಎಂ ಸಿದ್ದರಾಮಯ್ಯರಿಗೆ ಸಲಹೆ ನೀಡಿದ್ದಾರೆ.
ಇನ್ನು ಇದೇ ವೇಳೆ ಮಳೆಯಿಂದ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಟೆಕ್ಕಿ ಸಾವು ಪ್ರಕರಣ ಸಂಬಂಧ ಮಾತನಾಡಿದ ಬೊಮ್ಮಾಯಿ, ಕೆಲವೇ ಗಂಟೆಗಳ ಮಳೆಗೆ ಸಾವು ಆಗಿರುವುದು ನೋವಿನ ಸಂಗತಿ. ಬಿಬಿಎಂಪಿ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿ ಮಾಡಲಿಲ್ಲ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗೆ ಮೂವರು ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು