ಶಿವಣ್ಣ ಬಗ್ಗೆ ಅವಹೇಳನಕಾರಿ ರೀತಿಯ ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ

ಬೆಂಗಳೂರು :ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವುದಕ್ಕೆ ಮೊನ್ನೆಯಷ್ಟೇ ಸಂಸದ ಪ್ರತಾಪ್ ಸಿಂಹ ತಮ್ಮದೇ ಆದ ರೀತಿಯಲ್ಲಿ ಟಾಂಗ್ ಕೊಟ್ಟಿದ್ದರು. ನಂತರ ‘ನಾನು ಡಾ.ರಾಜ್ ಕುಟುಂಬ ಅಭಿಮಾನಿ’ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು. ಇದೀಗ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಕೂಡ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ.

ಫೇಸ್ ಬುಕ್ ನಲ್ಲಿ ಶಿವರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿರುವ ಪ್ರಶಾಂತ್ ಸಂಬರ್ಗಿ. ‘ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ’ ಎಂದು ಬರೆದುಕೊಂಡಿದ್ದಾರೆ.
ಪ್ರಶಾಂತ್ ಸಂಬರ್ಗಿಯ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಅನೇಕರು ಪ್ರಶಾಂತ್ ಸಂಬರ್ಗಿ ವಿರುದ್ಧವೇ ಗರಂ ಆಗಿದ್ದಾರೆ. ತಮ್ಮ ವಿರುದ್ಧ ಕಾಮೆಂಟ್ ಮಾಡಿದವರನ್ನು ಡಿಲಿಟ್ ಮಾಡಿ, ಡಸ್ಟ್ ಬಿನ್ ಗೆ ಹಾಕಲಾಗುವುದು ಎಂದು ಕಾಮೆಂಟ್ ಬೇರೆ ಮಾಡಿದ್ದಾರೆ ಪ್ರಶಾಂತ್.

ಸಿನಿಮಾ ರಂಗದ ಮೇಲೆ ಅನೇಕ ಬಾರಿ ಮುಗಿಬಿದ್ದಿದ್ದಾರೆ ಪ್ರಶಾಂತ್ ಸಂಬರ್ಗಿ. ಡಬ್ಬಿಂಗ್ ವಿಚಾರದಿಂದ ಹಿಡಿದು ಡ್ರಗ್ಸ್ ತನಕವೂ ಸಂಬರ್ಗಿ ಧ್ವನಿ ಎತ್ತಿದ್ದಾರೆ. ಮೀಟೂ ಕೇಸ್ ನಲ್ಲೂ ಅವರು ನಟಿಯ ವಿರುದ್ಧ ಮಾತನಾಡಿದ್ದರು. ಇದೀಗ ಡಾ.ರಾಜ್ ಕುಟುಂಬ ಎಂಬ ಜೇನುಗೂಡಿಗೆ ಗುರಿಯಿಟ್ಟಿದ್ದಾರೆ.