ಮೂವರು ಶಸ್ತ್ರಸಜ್ಜಿತ ದರೋಡೆಕೋರರಿಂದ ಬ್ಯಾಂಕ್ ಲೂಟಿಗೆ ಯತ್ನ: ದಿಟ್ಟತನದಿಂದ ಕಳ್ಳರನ್ನು ಹಿಮ್ಮೆಟ್ಟಿಸಿದ ಮಹಿಳಾ ಪೊಲೀಸರು.!

ಬಿಹಾರ: ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬ್ಯಾಂಕ್ ಒಳಗೆ ಬಲವಂತವಾಗಿ ನುಗ್ಗಲು ಯತ್ನಿಸಿದ್ದರು. ಈ ವೇಳೆ ಕಾವಲು ಕಾಯುತ್ತಿದ್ದ ಇಬ್ಬರು ಮಹಿಳಾ ಪೊಲೀಸರು​ ಕಳ್ಳರ ಜೊತೆ ದಿಟ್ಟತನದ ಹೋರಾಟ ನಡೆಸಿ ಹಿಮ್ಮೆಟ್ಟಿಸಿದ್ದಾರೆ. ಈ ಘಟನೆಯು ಹಾಜಿಪುರ ಜಿಲ್ಲೆಯ ವೈಶಾಲಿಯ ಸೆಂಡುರಿ ಚೌಕ್​ನಲ್ಲಿರುವ ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿದೆ.

ಬ್ಯಾಂಕ್​ನಲ್ಲಿ ಮಹಿಳಾ ಗಾರ್ಡ್​ಗಳಾದ ಜೂಹಿ ಕುಮಾರಿ, ಶಾಂತಿ ಕುಮಾರಿ ಕಾವಲಿಗಿದ್ದರು. ಈ ವೇಳೆ ಬಾಗಿಲಿನಿಂದ ಮೂವರು ಕಳ್ಳರು ಒಳನುಗ್ಗಲು ಯತ್ನಿಸಿದ್ದಾರೆ. ಆಗ ದಾಖಲೆಗಳನ್ನು ತೋರಿಸಿ ಎಂದು ಮಹಿಳಾ ಗಾರ್ಡ್ ಕೇಳಿದಾಗ ಕೂಡಲೇ ಜೇಬಿನಿಂದ ಪಿಸ್ತೂಲ್ ತೆಗೆದು ಶೂಟ್ ಮಾಡಲು ಕಳ್ಳರು ಯತ್ನಿಸಿದ್ದಾರೆ. ಕೂಡಲೇ ಕಳ್ಳರ ಮೇಲೆರಗಿದ ಇಬ್ಬರು ಮಹಿಳಾ ಪೊಲೀಸರು ದಿಟ್ಟತನದಿಂದ ಹೋರಾಡಿ ಕಳ್ಳರನ್ನು ಓಡಿಸಿದ್ದಾರೆ. ಇನ್ನು ದಾಳಿಯಲ್ಲಿ ಮಹಿಳಾ ಸಿಬ್ಬಂದಿ ಜೂಹಿ ಕುಮಾರಿ ಗಾಯಗೊಂಡಿದ್ದಾರೆ.

ಮಹಿಳಾ ಗಾರ್ಡ್​​ಗಳು ದರೋಡೆಕೋರರನ್ನ ಹಿಮ್ಮೆಟ್ಟಿಸಿದ ವಿಡಿಯೋ ಎಲ್ಲೆಡೆ ತುಂಬಾ ವೈರಲ್ ಆಗಿದ್ದು, ಮಹಿಳಾ ಪೇದೆಗಳ ಧೈರ್ಯಕ್ಕೆ ಶಹಬ್ಬಾಸ್‍ಗಿರಿ ವ್ಯಕ್ತವಾಗುತ್ತಿದೆ. ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಹಿರಿಯ ಪೊಲೀಸ್ ಅಧಿಕಾರಿ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.