ಭಟ್ಕಳ: ವಿಷನ್ ಚಾರಿಟೇಬಲ್ ಟ್ರಸ್ಟ್ ಭಟ್ಕಳ ಇದರ ಪ್ರಾರಂಭಿಕ ಹೆಜ್ಜೆಯಾಗಿ ರಕ್ತದಾನ ಶಿಬಿರ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಮತ್ತು ರಾಜ್ಯ ಜಾನಪದ ಪ್ರಶಸ್ತಿ ವಿಜೇತೆ ಶಾರದಾ ಮೊಗೇರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀ ದುರ್ಗಾ ಪರಮೇಶ್ವರಿ ಸಭಾಭವನ ಅಳ್ವೇಕೊಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು
ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ತನಕ ವಿಷನ್ ಚಾರಿಟಬಲ್ ಟ್ರಸ್ಟ್ ಭಟ್ಕಳ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಅನೇಕ ದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಇತ್ತೀಚಿಗಷ್ಟೇ ಬರ್ಮಿಂಗ್ ಹ್ಯಾಮ್ ನಲ್ಲಿ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಮ್ಸ್ ನ ವೇಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕುಂದಾಪುರದ ಗುರುರಾಜ ಪೂಜಾರಿ ಮತ್ತು ರಾಜ್ಯ ಜಾನಪದ ಅಕಾಡೆಮಿ ಇಂದ ರಾಜ್ಯ ಪ್ರಶಸ್ತಿಗೆ ಭಾಜನರಾದ ಶಾರದಾ ಮೊಗೇರ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಲಕ್ಷ್ಮಿ ಸರಸ್ವತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಬೈದೀನಮನೆ, ಈರ್ವರು ಸನ್ಮಾನಿತರನ್ನು ಅಭಿನಂದಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುರಾಜ್ ಪೂಜಾರಿ, ತಮ್ಮ ಹಿಂದಿನ ವಿದ್ಯಾರ್ಥಿ ಜೀವನದ ಕಷ್ಟ ಹಾಗೂ ಕ್ರೀಡಾ ಜೀವನದ ಅಭ್ಯಾಸ ಕ್ರಮದ ಸಾಧನೆಯನ್ನು ಮೆಲುಕು ಹಾಕಿ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇದು ನನ್ನ ಎರಡನೇ ಪದಕದ ಸಾಧನೆಯಾಗಿದ್ದು, ಮುಂದೆಯೂ ಹೆಚ್ಚಿನ ಸಾಧನೆ ಮಾಡುವುದು ನನ್ನ ಗುರಿಯಾಗಿದೆ ಎಂದರು.
ಇನ್ನೋರ್ವ ಸನ್ಮಾನಿತರಾದ ಶಾರದ ಮೊಗೇರ ಜಾನಪದ ಹಾಡನ್ನು ಹಾಡುವುದರ ಮೂಲಕ ಕೃತಜ್ಞತೆ ಸಲ್ಲಿಸಿದ್ದು ಪ್ರೇಕ್ಷಕರಲ್ಲಿ ಹರ್ಷ ಮೂಡಿಸಿತ್ತು. ಅತಿಥಿಗಳಾಗಿ ಆಗಮಿಸಿದ ಅಳ್ವೇಕೊಡಿ ಮಾರಿ ಜಾತ್ರಾ ಸಮಿತಿಯ ಅಧ್ಯಕ್ಷ ರಾಮ ಮೊಗೇರ, ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸನ್ಮಾನಿತರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಶ್ರೀ ದುರ್ಗಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರೂ ಆದ ತಿಮ್ಮಪ್ಪ ಹೊನ್ನಿಮನೆ ಮಾತನಾಡಿ ವಿಧ್ಯಾಭ್ಯಾಸದ ಜೊತೆಗೆ ಕ್ರೀಡೆಯನ್ನು ಅಳವಡಿಸಿಕೊಂಡು ನಮ್ಮ ನಾಡಿನ ಕೀರ್ತಿ ಪತಾಕೆಯನ್ನು ಜಗತ್ತಿನೆಲ್ಲೆಡೆ ಹಾರಿಸಿದ ಗುರುರಾಜ್ ಪೂಜಾರಿ ಅವರ ಸಾಧನೆಯನ್ನು ಶ್ಲ್ಯಾಘಿಸಿ, ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು. ಜೊತೆಗೆ ಶಾರದಾ ಮೊಗೇರ ಅವರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಅಳ್ವೆಕೋಡಿ ಇದರ ಅಧ್ಯಕ್ಷರಾದ ಹನುಮಂತ ನಾಯ್ಕ, ಮೊಗೇರ ಸಮಾಜದ ಪ್ರಮುಖರಾದ ಎಫ ಕೆ ಮೊಗೇರ, ವಿಷನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶ್ರೀದತ್ತ ಮೊಗೇರ ಉಪಸ್ಥಿತರಿದ್ದರು.