ಬೆಂಗಳೂರು, ಅಕ್ಟೋಬರ್ 22: ನಗರದ ಪಿಜಿಯೊಂದರಲ್ಲಿ ಬಿಟೆಕ್ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ತಿಗಣೆ ಔಷಧಿಯ ವಾಸನೆಯಿಂದ ವಿದ್ಯಾರ್ಥಿ ಪವನ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ಪವನ್ ಆಂಧ್ರಪ್ರದೇಶದ ತಿರುಪತಿ ಮೂಲದವನು ಎಂದು ತಿಳಿದುಬಂದಿದೆ. ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ. ವರದಿಗಳ ಪ್ರಕಾರ, ಪವನ್ ವಾಸವಾಗಿದ್ದ ಪಿಜಿಯಲ್ಲಿ ತಿಗಣೆ ಔಷಧಿ ಸಿಂಪಡಣೆ ಮಾಡಲಾಗಿತ್ತು. ಆದರೆ ಅದರಿಂದ ಉಂಟಾದ ವಿಷಕಾರಿ ವಾಸನೆ ಕುರಿತು ಮಾಹಿತಿ ಇಲ್ಲದೇ ಪವನ್ ಕೊಠಡಿಗೆ ತೆರಳಿದ್ದಾನೆ. ವಿಷಕಾರಿ ವಾಸನೆಯನ್ನು ಉಸಿರಾಡಿದ ಪರಿಣಾಮ ಅಸ್ವಸ್ಥನಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಪವನ್ ತಂದೆ ದೇವರಾಜಲು ಮತ್ತು ತಾಯಿ ರಮ್ಯಾ “ಘಟನೆ ನಡೆಯುವ ಮುನ್ನ ಪವನ್ ಕೊನೆ ಬಾರಿ ನಮಗೆ ಕರೆ ಮಾಡಿದ್ದ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದ. ಆಗ ಪವನ್ ಇದ್ದ ಕೊಠಡಿಯಲ್ಲಿ ಬೇರೆ ಯಾರೂ ಇರಲಿಲ್ಲ. ತಿಗಣೆ ಔಷಧಿಯ ಸಿಂಪಡಣೆಯಿಂದ ಉಸಿರುಗಟ್ಟಿ ಅಸ್ವಸ್ಥನಾಗಿದ್ದಾನೆ. ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ” ಎಂದು ವಿಷಾದಿಸಿದ್ದಾರೆ. ಅಶ್ವಥನಗರದ ಬಿಎಸ್‌ಆರ್ ಪಿಜಿ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
