ನವದೆಹಲಿ, ಸೆಪ್ಟೆಂಬರ್ 1: ಜಿಎಸ್ಟಿ ಸಂಗ್ರಹ ಆಗಸ್ಟ್ನಲ್ಲಿ ಶೇ. 6.5ರಷ್ಟು ಹೆಚ್ಚಾಗಿದೆ. ಸರ್ಕಾರ ಇಂದು ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ 1.86 ಲಕ್ಷ ಕೋಟಿ ರೂಗಳಷ್ಟು ಜಿಎಸ್ಟಿ ತೆರಿಗೆ ಬಂದಿದೆ. ಜುಲೈನಲ್ಲಿ 1.96 ಲಕ್ಷ ಕೋಟಿ ರೂನಷ್ಟು ತೆರಿಗೆ ಸಿಕ್ಕಿತ್ತು. ಸತತ ಎಂಟನೇ ತಿಂಗಳು ಟ್ಯಾಕ್ಸ್ ಸಂಗ್ರಹ 1.80 ಲಕ್ಷ ಕೋಟಿ ರೂ ಮೇಲ್ಪಟ್ಟಿದೆ.

ಜುಲೈಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಕಡಿಮೆ ಆಗಿದೆಯಾದರೂ, ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ. 6.5ರಷ್ಟು ಹೆಚ್ಚಳವಾಗಿದೆ. 2024ರ ಆಗಸ್ಟ್ನಲ್ಲಿ 1.74 ಲಕ್ಷ ಕೋಟಿ ರೂ ನಷ್ಟು ಜಿಎಸ್ಟಿ ಆದಾಯ ಸರ್ಕಾರಕ್ಕೆ ಹರಿದುಬಂದಿತ್ತು.
ಕಳೆದ ಕೆಲ ವರ್ಷಗಳಿದ ಜಿಎಸ್ಟಿ ಸಂಗ್ರಹ ಸತತವಾಗಿ ಏರಿಕೆ ಆಗುತ್ತಲೇ ಬಂದಿದೆ. 2020-21ರಲ್ಲಿ ಆ ಹಣಕಾಸು ವರ್ಷದಲ್ಲಿ ಸಿಕ್ಕ ಜಿಎಸ್ಟಿ ಆದಾಯ 11.37 ಲಕ್ಷ ಕೋಟಿ ರೂ ಮಾತ್ರವೇ. 2023-24ರಲ್ಲಿ ಇದು 20.18 ಲಕ್ಷ ಕೋಟಿ ರೂಗೆ ಏರಿದೆ.

2025-26ರ ಹಣಕಾಸು ವರ್ಷದ ಮೊಲದ ಕ್ವಾರ್ಟರ್ನಲ್ಲಿ ಜಿಎಸ್ಟಿ ಸಂಗ್ರಹ ಶೇ. 10.7ರಷ್ಟು ಹೆಚ್ಚಾಗಿ 8.18 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ ಸಂಗ್ರಹವಾದ ಜಿಎಸ್ಟಿ 7.38 ಲಕ್ಷ ಕೋಟಿ ರೂ. ಈ ಏಪ್ರಿಲ್ನಿಂದ ಜೂನ್ ಕ್ವಾರ್ಟರ್ನಲ್ಲಿ ಜಿಎಸ್ಟಿ ಡಬಲ್ ಅಂಕಿಯ ಪ್ರತಿಶತದಲ್ಲಿ ಹೆಚ್ಚಳ ಕಂಡಿದ್ದು ವಿಶೇಷ. ನಂತರದ ತಿಂಗಳುಗಳಲ್ಲಿ ಏರಿಕೆ ಪ್ರಮಾಣ ಕಡಿಮೆ ಆಗಿದೆಯಾದರೂ ಮಾಸಿಕವಾಗಿ 1.80 ಲಕ್ಷ ಕೋಟಿ ರೂ ಮಟ್ಟಕ್ಕಿಂತ ಇಳಿಕೆಯಾಗಿಲ್ಲಾ .

