ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 51 ರೂ. ಕಡಿತ

ನವದೆಹಲಿ, ಸೆಪ್ಟೆಂಬರ್ 1: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ಕಂಡಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು 51.50 ರೂ.ಗಳಷ್ಟು ಕಡಿತಗೊಳಿಸಿದ್ದು, ಹೊಸ ದರ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಈ ಇಳಿಕೆ ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯವಾಗಿದ್ದು, 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪರಿಷ್ಕೃತ ದರದ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,580 ರೂ. ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ ಬದಲಾವಣೆಗೆ ಅನುಗುಣವಾಗಿ ಪ್ರತಿ ತಿಂಗಳು ಎಲ್‌ಪಿಜಿ ಬೆಲೆ ಪರಿಷ್ಕರಣೆ ನಡೆಯುತ್ತಿದ್ದು, ಆಗಸ್ಟ್‌ನಲ್ಲಿ 33.50 ರೂ. ಇಳಿಕೆ ಮಾಡಲಾಗಿತ್ತು. ಅದಕ್ಕೂ ಮೊದಲು ಜುಲೈನಲ್ಲಿ 58.50 ರೂ. ಕಡಿತ ಕಂಡಿತ್ತು. ಜೂನ್‌ನಲ್ಲಿ 24 ರೂ. ಕಡಿತ ಘೋಷಣೆ ಮಾಡಿ ದರವನ್ನು 1,723.50 ರೂ.ಗಳಿಗೆ ಇಳಿಸಲಾಗಿತ್ತು. ಏಪ್ರಿಲ್‌ನಲ್ಲಿ ಬೆಲೆ 1,762 ರೂ. ಇದ್ದು, ಫೆಬ್ರವರಿಯಲ್ಲಿ 7 ರೂ. ಇಳಿಕೆಯಾಗಿದ್ದರೆ, ಮಾರ್ಚ್‌ನಲ್ಲಿ 6 ರೂ. ಹೆಚ್ಚಳ ಕಂಡಿತ್ತು.