“ಕ್ರೆಡಿಟ್ ರೇಟಿಂಗ್ ಏರಿಕೆಯ ನಂತರ ಎಸ್‌ಬಿಐ ಸೇರಿದಂತೆ 10 ಬ್ಯಾಂಕುಗಳಿಗೆ ಎಸ್ & ಪಿ ಅಪ್‌ಗ್ರೇಡ್”

ನವದೆಹಲಿ, ಆಗಸ್ಟ್ 17: ಭಾರತದ ಕ್ರೆಡಿಟ್ ರೇಟಿಂಗ್ ಅನ್ನು 18 ವರ್ಷದ ಬಳಿಕ ‘ಬಿಬಿಬಿ’ಗೆ ಅಪ್​ಗ್ರೇಡ್ ಮಾಡಿದ್ದ ಎಸ್ ಅಂಡ್ ಪಿ ರೇಟಿಂಗ್ ಏಜೆನ್ಸಿ ಇದೀಗ ಭಾರತದ 10 ಹಣಕಾಸು ಸಂಸ್ಥೆಗಳ ರೇಟಿಂಗ್ ಅನ್ನೂ ಅಪ್​ಗ್ರೇಡ್ ಮಾಡಿದೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿಯಂತಹ ಬ್ಯಾಂಕುಗಳು, ಟಾಟಾ ಕ್ಯಾಪಿಟಲ್​ನಂತಹ ಹಣಕಾಸು ಸಂಸ್ಥೆಗಳು ಸೇರಿವೆ.

‘ದೇಶದ ಉತ್ತಮ ಆರ್ಥಿಕ ಬೆಳವಣಿಗೆಯ ಫಲವನ್ನು ಹಣಕಾಸು ಸಂಸ್ಥೆಗಳು ಉಪಯೋಗಿಸಲಿವೆ. ಕೆಟ್ಟ ಸಾಲಗಳ ಮರುವಸೂಲಾತಿ ಇತ್ಯಾದಿ ರಚನಾತ್ಮಕ ಸುಧಾರಣೆಗಳು ಬ್ಯಾಂಕುಗಳಿಗೆ ಬಲ ನೀಡಲಿವೆ ಪಡೆಯಲಿವೆ’ ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಎಸ್ ಅಂಡ್ ಪಿ ರೇಟಿಂಗ್ ಅಪ್​ಗ್ರೇಡ್ ಆದ ಭಾರತೀಯ ಹಣಕಾಸು ಸಂಸ್ಥೆಗಳು

  1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  2. ಎಚ್​ಡಿಎಫ್​ಸಿ ಬ್ಯಾಂಕ್
  3. ಐಸಿಐಸಿಐ ಬ್ಯಾಂಕ್
  4. ಎಕ್ಸಿಸ್ ಬ್ಯಾಂಕ್
  5. ಕೋಟಕ್ ಮಹೀಂದ್ರ ಬ್ಯಾಂಕ್
  6. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  7. ಇಂಡಿಯನ್ ಬ್ಯಾಂಕ್
  8. ಬಜಾಜ್ ಫೈನಾನ್ಸ್ ಬ್ಯಾಂಕ್
  9. ಟಾಟಾ ಕ್ಯಾಪಿಟಲ್
  10. ಎಲ್ ಅಂಡ್ ಟಿ ಫೈನಾನ್ಸ್

ಮುಂದಿನ 12-24 ತಿಂಗಳಲ್ಲಿ ಭಾರತದ ಬ್ಯಾಂಕುಗಳು ಸಾಕಷ್ಟು ಉತ್ತಮ ಲಾಭ, ಬಂಡವಾಳವನ್ನು ಹೊಂದಬಹುದು ಎಂದು ನಿರೀಕ್ಷಿಸಿದ್ದೇವೆ. ಹಣಕಾಸು ವ್ಯವಸ್ಥೆಯಲ್ಲಿ ಒಟ್ಟಾರೆ ಕ್ರೆಡಿಟ್ ರಿಸ್ಕ್ ಕಡಿಮೆ ಆಗಿದೆ ಎಂದು ಎಸ್ ಅಂಡ್ ಪಿ ಹೇಳಿದೆ.

ಭಾರತದ ಸಾವರೀನ್ ರೇಟಿಂಗ್ ‘ಬಿಬಿಬಿ’ಗೆ ಹೆಚ್ಚಳ

ಆಗಸ್ಟ್ 14ರಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಏಜೆನ್ಸಿಯು ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಬಿಬಿಬಿಗೆ ಅಪ್​ಗ್ರೇಡ್ ಮಾಡಿತು. 18 ವರ್ಷ ಬಳಿಕ ಈ ಗ್ರೇಡ್ ಅನ್ನು ಭಾರತಕ್ಕೆ ನೀಡಿದೆ. ಮುಂದಿನ 2-3 ವರ್ಷಗಳಲ್ಲಿ ಬೆಳವಣಿಗೆಗೆ ಪೂರಕವಾದ ಆರ್ಥಿಕ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಅಪ್​ಗ್ರೇಡ್ ಮಾಡಲಾಗಿದೆ.

ಬಿಬಿಬಿ ಎಂಬುದು ಎಷ್ಟು ಉಚ್ಚ ಕ್ರೆಡಿಟ್ ರೇಟಿಂಗ್?

ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಯಾರಾದರೂ ಬಂಡವಾಳ ಹೂಡಿಕೆ ಮಾಡಿದರೆ ಅಥವಾ ಸಾಲ ನೀಡಿದರೆ ಅದು ಮರಳುವ ಸಾಧ್ಯತೆ ಎಷ್ಟು ಎಂಬುದನ್ನು ಕ್ರೆಡಿಟ್ ರೇಟಿಂಗ್ ಮೂಲಕ ಅಳೆಯಲಾಗುತ್ತದೆ. ಈ ರೀತಿ ಕ್ರೆಡಿಟ್ ರೇಟಿಂಗ್ ನೀಡುವ ಹಲವು ಸಂಸ್ಥೆಗಳಿವೆ. ಅವುಗಳಲ್ಲಿ ಪ್ರಮುಖವಾದುವು ಎಸ್ ಅಂಡ್ ಪಿ, ಫಿಚ್ ಮತ್ತು ಮೂಡೀಸ್. ಇವು ಮೂರೂ ಕೂಡ ಅಮೆರಿಕದ ಮೂಲದವು.

ಎಸ್ ಅಂಡ್ ಪಿ, ಅಥವಾ ಸ್ಟ್ಯಾಂಡರ್ಡ್ ಅಂಡ್ ಪೂರ್ಸ್ ಸಂಸ್ಥೆ ಎಎಎ ಯಿಂದ ಹಿಡಿದು ಎಸ್‌ಡಿ/ಡಿ ವರೆಗೆ 20 ರೀತಿಯ ರೇಟಿಂಗ್ ನೀಡುತ್ತದೆ. ಎಎಎ ಅತ್ಯುಚ್ಚವಾದರೆ ಎಸ್‌ಡಿ/ಡಿ ಕನಿಷ್ಠತಮ ರೇಟಿಂಗ್. ಭಾರತಕ್ಕೆ ನೀಡಲಾಗಿರುವ ಬಿಬಿಬಿ ಮಧ್ಯಮ ಶ್ರೇಣಿಯಲ್ಲಿದೆ.