ಕರ್ನಾಟಕದಲ್ಲಿ ನಾಳೆಯೂ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, (ಆಗಸ್ಟ್ 12): ಸದ್ಯ ಕರ್ನಾಟಕದ  ಹಲವೆಡೆ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಲೆನಾಡು, ಕರಾವಳಿ, ಬೆಳಗಾವಿ, ಬೆಂಗಳೂರಿನಲ್ಲಿ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಆಗಸ್ಟ್ 13 ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಆಗಸ್ಟ್ 16ರವರೆಗೂ ಕರ್ನಾಟಕ ಹಲವೆಡೆ  ವ್ಯಾಪಕ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದ್ದರೆ, ಆ.16ರಂದು ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಆಗಸ್ಟ್ 13 ರಿಂದ 16ರ ವರೆಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಹಲವು ಕಡೆ ಭಾರಿ ಮಳೆ ಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಆಗಸ್ಟ್ 12 ರಿಂದ 18ರವರೆಗೆ ಬೆಂಗಳೂರಿನ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಮಧ್ಯಾಹ್ನವಾಗುತ್ತಿದ್ದಂತೆಯೇ ತುಂತುರು ಮಳೆ ಶುರುವಾಗುತ್ತೆ. ಸಂಜೆ, ರಾತ್ರಿ ವೇಳೆ ಜೋರು ಮಳೆಯಾಗುವುದು ಸಾಮಾನ್ಯವಾಗಿಬಿಟ್ಟಿದೆ. ಬಿಸಿಲು ಇಲ್ಲದ ಕಾರಣ ಬಟ್ಟೆ ಒಣಗುತ್ತಿಲ್ಲವೆಂದು ಜನರು ಚಿಂತೆಗೀಡಾಗಿದ್ದಾರೆ. ಸದ್ಯ ಇಂದು (ಆಗಸ್ಟ್ 12) ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೋಮವಾರ ಬೆಂಗಳೂರು ನಗರದಲ್ಲಿ ಮಳೆಯಾಗಿದೆ.ಎಚ್​​ಎಎಲ್​ನಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​​ನಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.