ಧಾರಾಕಾರ ಮಳೆಯಿಂದ ಉಕ್ಕಿ ಹರಿದ ಯಲ್ಲಮ್ಮವಾಡಿ ಕೆರೆ – ಯಲ್ಲಮ್ಮ ದೇವಿಯ ಮೂಲ ವಿಗ್ರಹ ಜಲಾವೃತ

ಚಿಕ್ಕೋಡಿ (ಬೆಳಗಾವಿ): ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ತಡರಾತ್ರಿ ಮಳೆಗೆ ಯಲ್ಲಮ್ಮವಾಡಿ ಕೆರೆ ತುಂಬಿ ಸುಕ್ಷೇತ್ರ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿ ದೇವಸ್ಥಾನ ಜಲ ದಿಗ್ಬಂಧನಗೊಂಡಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಸುಕ್ಷೇತ್ರ ಯಲ್ಲಮ್ಮದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿದೆ. ಹಳ್ಳದ ಪಕ್ಕದಲ್ಲಿ ದೇವಸ್ಥಾನ ಇರುವುದರಿಂದ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ಪರಿಣಾಮ ದೇವಸ್ಥಾನ ನೀರಿನಿಂದ ಸುತ್ತುವರೆದಿದೆ. ದೂರದಿಂದಲೇ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ಉಭಯ ರಾಜ್ಯಗಳ ಈ ದೇವಾಲಯಕ್ಕೆ ಭಕ್ತರ ಆಗಮನ ಅಧಿಕ ಇರುವುದರಿಂದ, ಅದರಲ್ಲೂ ಶ್ರಾವಣ ಮಾಸ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ. ಜಲಾವ್ರತ ಹಿನ್ನೆಲೆ ದೂರದಿಂದಲೇ ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.

ಕಳೆದ ಮೂರು ವರ್ಷದಲ್ಲಿ ಈ ವರ್ಷ ಅಪಾರ ಮಳೆಯಾಗಿದ್ದು, ಮೊದಲ ಬಾರಿಗೆ ದೇವಿಯ ವಿಗ್ರಹ ಮುಳುಗಡೆಯಾಗಿದೆ. ಗಡಿನಾಡು ಶಕ್ತಿ ದೇವತೆ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದೆ. ಮುಂಜಾಗ್ರತೆಯಾಗಿ ಐಗಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೇಡ್​ ಅಳವಡಿಸಿದ್ದಾರೆ.

ನೀರಿನ ಮಧ್ಯದಲ್ಲೂ ಕೂಡ ದೇವಿಗೆ ಪೂಜಾ ಕೈಂಕರ್ಯಗಳು ಹಾಗೂ ಶ್ರಾವಣ ಮಾಸ ಪ್ರಯುಕ್ತ ಪಂಚಾಮೃತ ಅಭಿಷೇಕವನ್ನು ಮುಂದುವರಿಸಲಾಗುವುದೆಂದು ದೇವಸ್ಥಾನದ ಅರ್ಚಕ ರಾಹುಲ್ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ.