ವರಮಹಾಲಕ್ಷ್ಮಿ ಸಂಭ್ರಮ ಮುಗಿಯುವ ಮುನ್ನವೇ ಕತ್ತಲಾದ ಜೀವನ – ಅಪಘಾತದಲ್ಲಿ ನವವಿವಾಹಿತೆ ಸಾ**

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿಣ ಕುಂಕುಮ ಪಡೆಯಲು ಹೋದ ವೇಳೆ ಅಪಘಾತಕ್ಕೀಡಾಗಿ ನವವಿವಾಹಿತೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಲಗ್ಗೆರೆ ಬಳಿ ನಡೆದಿದೆ.

ಗೀತಾ (23) ಸಾವಿಗೀಡಾದ ನವವಿವಾಹಿತೆ. ಗೀತಾ ಎರಡೂವರೆ ತಿಂಗಳ ಹಿಂದಷ್ಟೇ ಸುನೀಲ್ ಎಂಬವರನ್ನು ವಿವಾಹವಾಗಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಅರಶಿಣ ಕುಂಕುಮ ಪಡೆಯಲೆಂದು ನಂದಿನಿ ಲೇಔಟ್‌ನಲ್ಲಿರುವ ನಾದಿನಿ ಮನೆಗೆ ದಂಪತಿ ಹೊರಟಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿದೆ. 

ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಡ ಸುನೀಲ್‌ಗೆ ಗಾಯಗಳಾಗಿವೆ. ಘಟನೆ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಅಪಘಾತ ಸಂಬಂಧ ಲಾರಿ ಚಾಲಕ ಸುರೇಶ್‌ನನ್ನು ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.