ಶಿವಮೊಗ್ಗ ಸೇತುವೆಯಲ್ಲಿ ನಡುಮಧ್ಯೆ ಬೋಗಿಗಳು ಬೇರ್ಪಟ್ಟ ರೈಲು – ಅಪಾಯ ತಪ್ಪಿದ ದೃಶ್ಯ

ಶಿವಮೊಗ್ಗ: ನಗರದ ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿದ್ದಾಗಲೇ ರೈಲಿನ ಬೋಗಿಗಳು ಬೇರ್ಪಟ್ಟ ಘಟನೆ ಬುಧವಾರ ನಡೆದಿದೆ.

ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಬೇರ್ಪಟ್ಟಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ರೈಲು ಸಂಜೆ 5 ಗಂಟೆ ಹೊತ್ತಿಗೆ ಶಿವಮೊಗ್ಗ ರೈಲು ನಿಲ್ದಾಣದಿಂದ ಹೊರಟಿತ್ತು. ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿದ್ದಾಗಲೇ ಎರಡು ಬೋಗಿಗಳ ಮಧ್ಯೆ ಇದ್ದ ಕ್ಲಿಪಿಂಗ್ ಲಾಕ್ ತುಂಡಾಗಿದೆ. 

ಇಂಜಿನ್ ಸೇರಿದಂತೆ ಉಳಿದ ಬೋಗಿಗಳು ತುಂಗಾ ನದಿ ಸೇತುವೆ ಮೇಲೆ ನಿಂತಿದ್ದವು. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಸಲು ಸಾಧ್ಯವಾಗಿಲ್ಲ. ಇದರಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.

ಸುದ್ದಿ ತಿಳಿದು ರೈಲ್ವೆ ಇಂಜಿನಿಯರಿಂಗ್ ತಂಡ, ಗ್ಯಾರೇಜ್ & ಮೆಕಾನಿಕ್ ಸ್ಟಾಫ್ ಸ್ಥಳಕ್ಕೆ ಬಂದು ಲಾಕ್ ಸರಿಪಡಿಸಿದರು. ಬಳಿಕ ರೈಲು ಮೈಸೂರಿಗೆ ತೆರಳಿದೆ. ರೈಲು ನಿಗದಿತ ಸಮಯಕ್ಕಿಂತಲು ಒಂದು ಗಂಟೆ ತಡವಾಗಿದೆ ಎಂದು ತಿಳಿದುಬಂದಿದೆ.