ನವದೆಹಲಿ, ಜುಲೈ 29: ಹಣದ ಕಾಂಪೌಂಡಿಂಗ್ ಗುಣದ ಬಗ್ಗೆ ಸಾಕಷ್ಟು ಕೇಳಿರುತ್ತೇವೆ. ಹೂಡಿಕೆಯ ಅವಧಿ ಹೆಚ್ಚಿದಂತೆಲ್ಲಾ ಬೆಳವಣಿಗೆಯ ವೇಗವೂ ಹೆಚ್ಚುತ್ತಾ ಹೋಗುವುದು ಕಾಂಪೌಂಡಿಂಗ್ ಪರಿಣಾಮದಿಂದಾಗಿಯೇ. ಆದರೆ, ಹೆಚ್ಚಿನ ಹೂಡಿಕೆದಾರರು ಅಬ್ಬಬ್ಬಾ ಎಂದರೆ 10 ವರ್ಷಕ್ಕೆ ತಮ್ಮ ಹೂಡಿಕೆ ಅವಧಿಯನ್ನು ಸೀಮಿತಗೊಳಿಸುವುದುಂಟು. ಹೆಚ್ಚಿನ ಮಂದಿಗೆ 10 ವರ್ಷವೇ ದೀರ್ಘಾವಧಿ ಎನಿಸುತ್ತದೆ. ಹಣದ ನಿಜವಾದ ಕಾಂಪೌಂಡಿಂಗ್ ಗುಣವನ್ನು ನೋಡಲು ಹೆಚ್ಚು ಸಂಯಮ ಬೇಕಾಗುತ್ತದೆ. ಕನಿಷ್ಠವೆಂದರೂ 20 ವರ್ಷ ಹೂಡಿಕೆ ಇರಬೇಕು.

ಮೂವತ್ತು ವರ್ಷದಲ್ಲಿ 1 ಲಕ್ಷ ರೂ ಹೂಡಿಕೆಯನ್ನು 1 ಕೋಟಿ ರೂಗೆ ಬೆಳೆಸಿದ ಕೆಲ ಮ್ಯುಚುವಲ್ ಫಂಡ್ಗಳು ಈಗಲೂ ಇವೆ. ಮೂವತ್ತು ವರ್ಷ ಬಹಳ ದೊಡ್ಡ ಕಾಲವೇನಲ್ಲ. ಕೆಲಸಕ್ಕೆ ಸೇರಿದ ಹೊಸದರಲ್ಲೇ ಹೂಡಿಕೆ ಮಾಡಿದರೆ ನಿವೃತ್ತಿ ವಯಸ್ಸಿನೊಳಗೆ ನಿಮಗೆ ಹೇರಳ ರಿಟರ್ನ್ಸ್ ಸಿಕ್ಕಿಹೋಗುತ್ತದೆ.
ಕಳೆದ ಮೂರು ದಶಕದಲ್ಲಿ 1 ಲಕ್ಷ ರೂ ಹೂಡಿಕೆಯನ್ನು 1-3 ಕೋಟಿ ರೂವರೆಗೆ ಹೆಚ್ಚಿಸಿದ ಕೆಲ ಮ್ಯೂಚುವಲ್ ಫಂಡ್ಗಳ ವಿವರ ಇಲ್ಲಿದೆ…
- ಫ್ರಾಂಕ್ಲಿನ್ ಇಂಡಿಯಾ ಮಿಡ್ಕ್ಯಾಪ್ ಫಂಡ್: 30 ವರ್ಷದ ಹಿಂದೆ ಇದರಲ್ಲಿ ಲಂಪ್ಸಮ್ ಆಗಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ 2.76 ಕೋಟಿ ರೂ ಆಗಿರುತ್ತಿತ್ತು.
- ಫ್ರಾಂಕ್ಲಿನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್: ಇದರಲ್ಲಿ 1 ಲಕ್ಷ ರೂ ಹೂಡಿಕೆಯು 30 ವರ್ಷದಲ್ಲಿ 2.45 ಕೋಟಿ ರೂ ಆಗಿದೆ.
- ಎಚ್ಡಿಎಫ್ಸಿ ಫ್ಲೆಕ್ಸಿ ಕ್ಯಾಪ್ ಫಂಡ್: ಒಂದು ಲಕ್ಷ ರೂ ಹೂಡಿಕೆಯನ್ನು ಇದು 1.97 ಕೋಟಿ ರೂಗೆ ಹೆಚ್ಚಿಸಿದೆ.
- ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 1995ರ ಜುಲೈನಲಿ ಇದರಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಈಗ ಅದು 1.63 ಕೋಟಿ ರೂ ಆಗಿರುತ್ತಿತ್ತು.
- ಆದಿತ್ಯ ಬಿರ್ಲಾ ಎಸ್ಎಲ್ ಲಾರ್ಜ್ ಮತ್ತು ಮಿಡ್ಕ್ಯಾಪ್ ಫಂಡ್: ಇದರಲ್ಲಿ ಒಂದು ಲಕ್ಷ ರೂ ಹೂಡಿಕೆಯು 30 ವರ್ಷದಲ್ಲಿ 1.08 ಕೋಟಿ ರೂ ರಿಟರ್ನ್ಸ್ ತಂದಿದೆ.
