
ಬೆಂಗಳೂರು, ಜುಲೈ 19: ಕರ್ನಾಟಕ ಹೈಕೋರ್ಟ್ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ವಿಭು ಬಖ್ರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ನೂತನ ಮುಖ್ಯ ನ್ಯಾಯಮೂರ್ತಿಗೆ ಶುಭ ಹಾರೈಸಿದರು.
ಕೆಂದ್ರೀಯ ಸರ್ಕಾರ ಇತ್ತೀಚೆಗಷ್ಟೇ ನ್ಯಾ. ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿತ್ತು.
ವಿಭು ಬಖ್ರು ಅವರ ಬಗ್ಗೆ ಕೆಲವು ಪ್ರಮುಖ ಮಾಹಿತಿ:
- 1966ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದ ಅವರು, ದೆಹಲಿಯ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.
- 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಪಡೆದ ಅವರು, 1989ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಅರ್ಹತೆ ಪಡೆದರು.
- ನಂತರ 1990ರಲ್ಲಿ ಎಲ್‌ಎಲ್‌ಬಿ ಪೂರೈಸಿ, ವಕೀಲರಾಗಿ ನೋಂದಾಯಿಸಿಕೊಂಡರು.
ವಕೀಲರಾಗಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್, ಕಂಪನಿ ಕಾನೂನು ಮಂಡಳಿ ಮತ್ತಿತರ ನ್ಯಾಯಮಂಡಳಿಗಳಲ್ಲಿ ವಕೀಲಿಕೆ ನಡೆಸಿದ ಭಕ್ರು, 2011ರಲ್ಲಿ ಹಿರಿಯ ವಕೀಲರಾಗಿ ಗುರುತಿಸಲ್ಪಟ್ಟರು. 2013ರ ಏಪ್ರಿಲ್ 17ರಂದು ದೆಹಲಿ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, 2015ರಲ್ಲಿ ಸ್ಥಾಯಿ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.
