
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಸಂದರ್ಭದಲ್ಲಿ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
ಸಿಎಟಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ವಿಚಾರಣೆ ನಡೆಸಬೇಕು ಎಂದು ಕೋರಿ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ನ್ಯಾಯಪೀಠಕ್ಕೆ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ನಾಳೆ (ಗುರುವಾರ) ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.
2025ರ ಜೂನ್ 4ರಂದು ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿಸ್ದರು. ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಿದ್ದ ಸರ್ಕಾರ, ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್, ಅರ್ಜಿದಾರ ಅಧಿಕಾರಿ ವಿಕಾಸ್ ಕುಮಾರ್ ಮತ್ತಿತರರನ್ನು ಅಮಾನತು ಮಾಡಿ ಆದೇಶಿಸಿತ್ತು. ಇದನ್ನು ವಿಕಾಸ್ ಕುಮಾರ್ ಸಿಎಟಿಗೆ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಸಿಎಟಿ, ಸರ್ಕಾರದ ಅಮಾನತ್ತು ಆದೇಶ ರದ್ದುಪಡಿಸಿತ್ತು. ಅಲ್ಲದೇ, ತಕ್ಷಣ ಅರ್ಜಿದಾರರನ್ನು ಅದೇ ಹುದ್ದೆಗೆ ಮರುನಿಯೋಜನೆಗೆ ಮಾಡುವಂತೆ ಆದೇಶದಲ್ಲಿ ತಿಳಿಸಿತ್ತು.
ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಹೇಳಿದ್ದೇನು?: ಜೂನ್ 3ರಂದು ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಚಾಂಪಿಯನ್ ಆಗಿತ್ತು. ಅಂದು ರಾತ್ರಿ ನಗರದ ಬೀದಿಗಳಲ್ಲಿ ಸಾರ್ವಜನಿಕರು ವಿಜಯೋತ್ಸವ ನಡೆಸುತ್ತಿದ್ದರು. ಅವರನ್ನು ನಿಯಂತ್ರಿಸುವಲ್ಲಿ ಇಡೀ ಪೊಲೀಸ್ ವ್ಯವಸ್ಥೆ ನಿರತವಾಗಿತ್ತು. ಈ ನಡುವೆ ವಿಜಯೋತ್ಸವ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ಪಡೆಯದೇ, ಆರ್‌ಸಿಬಿ ಸಾಮಾಜಿಕ ಜಾಲಾತಾಣಗಳಲ್ಲಿ ಕರೆ ಕೊಟ್ಟಿದೆ. ಹೀಗಾಗಿ, ಸುಮಾರು 3 ರಿಂದ 5 ಲಕ್ಷ ಜನ ಸೇರಿದ್ದರು. ಇದೇ ವೇಳೆ ವಿಧಾನಸೌಧದ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಕಾರ್ಯಕ್ರಮ ಆಯೋಜಿಸಿದ್ದು, ಅದಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಮಯದ ಕೊರತೆ ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆರ್‌ಸಿಬಿ ಆಹ್ವಾನದಿಂದ ಜನದಟ್ಟಣೆ ಹೆಚ್ಚಾಗಿ ಘಟನೆ ಸಂಭವಿಸಿದೆ ಎಂದು ಸಿಎಟಿ ಹೇಳಿದೆ.
ಘಟನೆಗೆ ಕಾರಣರಾದ ಅಧಿಕಾರಿಗಳನ್ನು ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತು ಮಾಡಿರುವ ಆದೇಶಕ್ಕೆ ಸೂಕ್ತ ಪುರಾವೆಗಳಿಲ್ಲ. ಜೊತೆಗೆ, ಜನರನ್ನು ನಿಯಂತ್ರಣ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಮಯವಿತ್ತು ಎಂಬುದನ್ನು ತೋರಿಸುವುದಕ್ಕೂ ಸಾಕ್ಷ್ಯಾಧಾರಗಳಿಲ್ಲ. ವಿಜಯೋತ್ಸವ ಆಚರಣೆಗೆ ಸಂಘಟನೆಕಾರರಾದ ಸೂಕ್ತ ಮನವಿ ಸಲ್ಲಿಸದ ಪರಿಣಾಮ ಪೊಲೀಸರು ಅನುಮತಿಯನ್ನೂ ನೀಡಿರಲಿಲ್ಲ. ಅಲ್ಲದೇ, ಘಟನೆಗೆ ಕಾರಣ ಪತ್ತೆಗೆ ರಚನೆ ಮಾಡಿರುವ ಆಯೋಗ ಈವರೆಗೂ ವರದಿ ನೀಡಿಲ್ಲ ಎಂದು ಸಿಎಟಿ ತಿಳಿಸಿತ್ತು.
ಪೊಲೀಸರು ಮಾಂತ್ರಿಕರಲ್ಲ: ಪೊಲೀಸ್ ಸಿಬ್ಬಂದಿಯೂ ಕೂಡ ಮನುಷ್ಯರೇ ಆಗಿದ್ದಾರೆ. ಅವರು ಮಾತ್ರಿಕರಲ್ಲ, ದೇವರೂ ಅಲ್ಲ, ಅಷ್ಟು ಜನದಟ್ಟಣೆ ನಿಯಂತ್ರಿಸಲು ಪೊಲೀಸರ ಬಳಿ ಅಲ್ಲಾದ್ದೀನ್ ದೀಪದಂತಹ ಮಾಂತ್ರಿಕ ದೀಪವಿರಲಿಲ್ಲ. ಸೂಕ್ತ ಸಿದ್ದತೆ ಮಾಡಿಕೊಳ್ಳಲು ಪೊಲೀಸರಿಗೆ ಸಮಯ ನೀಡಬೇಕಿತ್ತು ಎಂದು ತಿಳಿಸಿ ಸರ್ಕಾರದ ಆದೇಶವನ್ನು ಸಿಎಟಿ ರದ್ದುಪಡಿಸಿ ಆದೇಶಿಸಿತ್ತು. ಇದೀಗ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
