ಮಹಿಳೆ ಕೊಲೆಗೈದು ಮೂಟೆ ಕಟ್ಟಿದ ದುಷ್ಕರ್ಮಿಗಳು: ಬಿಬಿಎಂಪಿ ಕಸದ ಲಾರಿಯಲ್ಲಿ ಶವ ಇಟ್ಟು ಪರಾರಿ! 

ಬೆಂಗಳೂರು : ಮಹಿಳೆಯೊಬ್ಬರನ್ನು ಹತ್ಯೆಗೈದು ಆಕೆಯ ಮೃತದೇಹವನ್ನು ಕಸದ ಲಾರಿಯಲ್ಲಿ ಹಾಕಿರುವ ಬೆಚ್ಚಿಬೀಳಿಸುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಸ್ಕೇಟಿಂಗ್‌ ಗ್ರೌಂಡ್ ಬಳಿ ನಡೆದಿದೆ.

ಸುಮಾರು 30-35 ವಯಸ್ಸಿನ ಮಹಿಳೆಯ ಮೃತದೇಹ ಮೂಟೆಕಟ್ಟಿರುವ ಸ್ಥಿತಿಯಲ್ಲಿ ಬಿಬಿಎಂಪಿಯ ಕಸದ ಲಾರಿಯಲ್ಲಿ ಪತ್ತೆಯಾಗಿದೆ. ಶನಿವಾರ ತಡರಾತ್ರಿ ಆಟೋ ರಿಕ್ಷಾದಲ್ಲಿ ಮೃತದೇಹ ತಂದಿರುವ ದುಷ್ಕರ್ಮಿಗಳು ಕಸದ ಲಾರಿಯಲ್ಲಿರಿಸಿ ಪರಾರಿ ಆಗಿರುವ ಕುರಿತು ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಪತ್ತೆಯಾದ ಸ್ಥಳದ ಅಕ್ಕಪಕ್ಕದ ರಸ್ತೆಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಕಲೆ ಹಾಕುತ್ತಿದ್ದು, ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.