ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣ ; ಕರ್ನಾಟಕದ 18 ಕಡೆ ಇ.ಡಿ ದಾಳಿ

ಬೆಂಗಳೂರು, ಜೂನ್​ 25: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಬಿಎಂಎಸ್  ಕಾಲೇಜು ಸೇರಿ ಕರ್ನಾಟಕದ 18 ಕಡೆ ಇ.ಡಿ ದಾಳಿ  ಮಾಡಿದೆ. ಮಲ್ಲೇಶ್ವರಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ ದಾಳಿ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡಿದರು.

ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಕೇಸ್​

2021-22ರಲ್ಲಿ ನಡೆದಿದ್ದ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬಿಎಂಎಸ್​ ಕಾಲೇಜಿನ ಟ್ರಸ್ಟ್ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸೀಟ್ ಬ್ಲಾಕಿಂಗ್ ಕುರಿತು ರಮೇಶ್ ನಾಯಕ್ ದೂರು ನೀಡಿದ್ದರು. ಹಾಗಾಗಿ ಟ್ರಸ್ಟ್​ ಅಧ್ಯಕ್ಷೆ ರಾಗಿಣಿ ನಾರಾಯಣ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಎಐಸಿಟಿಇ, ಯುಜಿಸಿ ನಿಯಮ ಉಲ್ಲಂಘಿಸಿ ಮೆರಿಟ್ ಸೀಟ್ ಹಂಚಿಕೆ ಮಾಡದೆ, ಅಕ್ರಮವಾಗಿ ಏಜೆಂಟ್​ ಮೂಲಕ ಸೀಟ್ ಹಂಚಿಕೆ ಮಾಡಲಾಗಿತ್ತು. ಆ ಮೂಲಕ ಖಾಸಗಿ ಕಾಲೇಜುಗಳು ಕೋಟ್ಯಂತರ ರೂ ಹಣ ಸಂಗ್ರಹ ಮಾಡಿರುವ ಆರೋಪ ಕೇಳಿಬಂದಿತ್ತು.

ಎರಡನೆ ಬಾರಿಗೆ‌ ಆಕಾಶ್ ಇಂಜಿನಿಯರಿಂಗ್ ಕಾಲೇಜ್​​ ಮೇಲೆ ಇಡಿ ದಾಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಆಕಾಶ್​ ಇಂಜಿನಿಯರಿಂಗ್ ಕಾಲೇಜ್​​ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಂಜಿನಿಯರಿಂಗ್ ಸೀಟ್​ ಬ್ಲಾಕಿಂಗ್ ಆರೋಪ ಹಿನ್ನೆಲೆ ಎರಡನೆ ಬಾರಿಗೆ‌ ಆಕಾಶ್​ ಇಂಜಿನಿಯರಿಂಗ್ ಕಾಲೇಜ್​​ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಏನಿದು ಸೀಟ್ ಬ್ಲಾಕಿಂಗ್ ದಂಧೆ?

ಸಿಂಪಲ್​ ಆಗಿ ಹೇಳುವುದಾದರೆ ಮೊದಲೇ ಕಾಯ್ದಿರಿಸುವುದು ಅಥವಾ ರಿಸರ್ವೇಶನ್ ಪದ್ಧತಿ ಎನ್ನಬಹುದು. ಕೆಲವು ಪ್ರತಿಷ್ಠಿತ ಕಾಲೇಜುಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸೀಟ್ ರಿಸರ್ವ್ ಮಾಡುತ್ತವೆ ಎನ್ನಬಹುದು.

ಪ್ರತಿ ವರ್ಷ ಅತ್ಯುತ್ತಮ ಕಾಲೇಜುಗಳಿಗೆ‌ ಸೇರಬೇಕೆಂಬುವುದು ಮಕ್ಕಳು ಮತ್ತ ಪೋಷಕರಲ್ಲಿ ತವಕ ಹೆಚ್ಚಿದೆ. ಇದನ್ನೇ ಭಂಡವಾಳವಾಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಈ ಸೀಟ್ ಬ್ಲಾಕಿಂಗ್ ದಂಧೆ ನಡೆಸಿವೆ.