“ತಮ್ಮ ತಪ್ಪು ಅರಿವಾದರೆ ಯಾರೇ ಆದರೂ ಸಹ ಪಕ್ಷಕ್ಕೆ ಮರಳಬಹುದು ” -ಬಿ.ವೈ ವಿಜಯೇಂದ್ರ

ಬೆಂಗಳೂರು: ತಮ್ಮ ತಪ್ಪು ಅರಿವಾದರೆ ಯಾರೇ ಆದರೂ ಸಹ ಪಕ್ಷಕ್ಕೆ ಮರಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮುಕ್ತ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಇದೆಲ್ಲಾ ಕೇಂದ್ರದ ಮಟ್ಟದಲ್ಲಿ ಚರ್ಚೆ ಆಗುವ ವಿಚಾರ. ನಮ್ಮ ಹಂತದಲ್ಲಿ ಚರ್ಚೆ ಆಗಲ್ಲ. ಆದ್ರೆ ಯಾರ‍್ಯಾರು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ವಾಪಸ್ ಬರಬೇಕು ಅನ್ಕೊಂಡಿದ್ದಾರೋ ಅವರು ಬರಬಹುದು ಎಂದು ಹೇಳಿದ್ದಾರೆ.

ಇನ್ನು ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಎಲ್ಲರೂ ವ್ಯತ್ಯಾಸ ಮರೆತು ಹೋಗಿ ಮುಂದೆ ಸಾಗಿ ಎಂದು ಅಮಿತ್ ಶಾ ಸೂಚಿಸಿದ್ದಾರೆ. ಹಳೆಯದೆಲ್ಲಾ ಮರೆತು ಒಟ್ಟಾಗಿ ಹೋಗಿ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದಿನ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸ್ತಿದ್ದೇನೆ. ಪ್ರತಿ ಸಂದರ್ಭದಲ್ಲೂ ಹೈಕಮಾಂಡ್‌ಗೆ ಮಾಹಿತಿ ಕೊಡ್ತಾ ಬಂದಿದ್ದೇನೆ. ವರಿಷ್ಠರ ತೀರ್ಮಾನ ಏನಿರುತ್ತದೆ ಎಂದು ಕಾದು ನೋಡಬೇಕು. ಅಂತಿಮವಾಗಿ ಯಾರನ್ನು ಅಧ್ಯಕ್ಷರಾಗಿ ಮಾಡಬೇಕು. ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಒಳ್ಳೆಯದು ಎಂದು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.