
ನವದೆಹಲಿ: ಅಹಮದಾಬಾದ್ ವಿಮಾನ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ಸಂಸ್ಥೆ ಈಗ ವಿಮಾನಗಳ ತಾಂತ್ರಿಕ ಪರಿಶೀಲನೆಗೆ ಮುಂದಾಗಿದೆ. ಈ ಹಿನ್ನೆಲೆ ದೇಶಾದ್ಯಂತ 8 ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಜೊತೆಗೆ ಜು.15ರವರೆಗೆ 16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಯಾನವನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.
ಜೂ.12ರ ಅಹಮದಾಬಾದ್ ವಿಮಾನ ದುರಂತದ ಬಳಿಕ ಏರ್ ಇಂಡಿಯಾ ವಿಮಾನಗಳಲ್ಲಿ ಒಂದಿಲ್ಲೊಂದು ದೋಷಗಳು ಕಾಣಿಸಿಕೊಳ್ಳುತ್ತಲೇ ಇದೆ. ಹೀಗಾಗಿ ವಿಮಾನಗಳಲ್ಲಿನ ತಾಂತ್ರಿಕ ಸಮಸ್ಯೆ ಹಾಗೂ ಇನ್ನಿತರ ಪರಿಶೀಲನೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆ ಇಂದು (ಜೂ.20) ಏರ್ ಇಂಡಿಯಾದ ಎಂಟು ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಜೊತೆಗೆ ಜೂ.21ರಿಂದ ಜು.15ರವೆಗೆ 16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಯಾನ ಸ್ಥಗಿತಗೊಳ್ಳಲಿದೆ ಹಾಗೂ 3 ವಿದೇಶಿ ತಾಣಗಳಲ್ಲಿ ವಿಮಾನ ಸಂಚಾರ ಇರುವುದಿಲ್ಲ ಎಂದು ತಿಳಿಸಿದೆ.
ಯಾವ ಯಾವ ವಿಮಾನಗಳು ರದ್ದು?
ಸಮಸ್ಯೆ ಮುಂದುವರಿದ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನಗಳಾದ AI906 ದುಬೈನಿಂದ ಚೆನ್ನೈಗೆ, AI308 ದೆಹಲಿಯಿಂದ ಮೆಲ್ಬೋರ್ನ್‌ಗೆ, AI309 ಮೆಲ್ಬೋರ್ನ್‌ನಿಂದ ದೆಹಲಿಗೆ, AI2204 ದುಬೈನಿಂದ ಹೈದರಾಬಾದ್‌ಗೆ ಹಾಗೂ ದೇಶೀಯ ವಿಮಾನಗಳಾದ AI874 ಪುಣೆಯಿಂದ ದೆಹಲಿಗೆ, AI456 ಅಹಮದಾಬಾದ್‌ನಿಂದ ದೆಹಲಿಗೆ, AI2872 ಹೈದರಾಬಾದ್‌ನಿಂದ ಮುಂಬೈಗೆ, AI571 ಚೆನ್ನೈನಿಂದ ಮುಂಬೈಗೆ ಸಂಚರಿಸಬೇಕಿದ್ದ ವಿಮಾನಗಳು ರದ್ದಾಗಿವೆ. ಹೀಗಾಗಿ ಪ್ರಯಾಣಿಕರಿಗೆ ಟಿಕೆಟ್ ರದ್ದತಿ ಹಾಗೂ ಮರುಹೊಂದಿಕೆ, ಸಂಪೂರ್ಣ ಮರುಪಾವತಿ ನೀಡುವುದಾಗಿ ತಿಳಿಸಿದೆ
ಇದಲ್ಲದೆ ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ದೂರದ ಪೂರ್ವ ನಗರಗಳನ್ನು ಸಂಪರ್ಕಿಸುವ 16 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಯಾನ ಸ್ಥಗಿತಗೊಳ್ಳಲಿದೆ. ಜೊತೆಗೆ ಉತ್ತರ ಅಮೆರಿಕಾದ ಮಾರ್ಗಗಳಾದ ದೆಹಲಿ-ಟೊರೊಂಟೊ, ದೆಹಲಿ-ವ್ಯಾಂಕೋವರ್, ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ, ದೆಹಲಿ-ಚಿಕಾಗೊ ಮತ್ತು ದೆಹಲಿ-ವಾಷಿಂಗ್ಟನ್‌ಗೆ ವಿಮಾನ ಸಂಚಾರ ಕಡಿಮೆಯಾಗಲಿದೆ.
ದೆಹಲಿ-ನೈರೋಬಿ, ಅಮೃತಸರ-ಲಂಡನ್ ಮತ್ತು ಗೋವಾ-ಲಂಡನ್ ಮಾರ್ಗಗಳಲ್ಲಿ ಜು.15ರವರೆಗೆ ವಿಮಾನಯಾನ ಸ್ಥಗಿತಗೊಳ್ಳಲಿದೆ. ವಾರಕ್ಕೆ ನಾಲ್ಕು ವಿಮಾನಗಳನ್ನು ಹೊಂದಿರುವ ದೆಹಲಿ-ನೈರೋಬಿ ಮಾರ್ಗ, ವಾರಕ್ಕೆ ತಲಾ ಮೂರರಂತೆ ವಿಮಾನಗಳನ್ನು ಹೊಂದಿರುವ ಅಮೃತಸರ-ಲಂಡನ್ (ಗ್ಯಾಟ್ವಿಕ್) ಹಾಗೂ ಗೋವಾ (ಮೋಪಾ)-ಲಂಡನ್ (ಗ್ಯಾಟ್ವಿಕ್) ಮಾರ್ಗಗಳಲ್ಲಿ ವಿಮಾನ ಸಂಚರಿಸುವುದಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ವಿಮಾನ ಅಪಘಾತದ ನಂತರದಿಂದ ಈವರೆಗೆ 60 ವಿಮಾನಗಳು ರದ್ದಾಗಿದ್ದು, ವಿಮಾನ ದುರಂತದ ನಂತರ ವಿಮಾನಗಳ ಪರಿಶೀಲನೆ ಹಾಗೂ ತನಿಖಾ ದೃಷ್ಟಿಯಿಂದ ಈ ಬೆಳವಣಿಗೆ ನಡೆದಿದೆ. ಮುಂದಿನ ದಿನಗಳಲ್ಲಿ ವಿಮಾನಗಳ ಪರಿಶೀಲನೆ ಹೆಚ್ಚಾಗಲಿದೆ.
