ಪೂಜೆಯ ನೆಪದಲ್ಲಿ ಮಹಿಳೆಯ ಮೇಲೆ ಲೈಂಗಿಕ ಅತ್ಯಾಚಾರ  ಆರೋಪ:

ಬೆಂಗಳೂರು: ಮಾಟ, ಮಂತ್ರ ನಿವಾರಣೆಗೆ ಪೂಜೆಯ ನೆಪದಲ್ಲಿ ಮಹಿಳೆಯನ್ನು ಬ್ಲ್ಯಾಕ್​ಮೇಲ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಅರ್ಚಕ ಅರುಣ್.ಟಿ.ಎ ಎಂಬಾತನನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ಮಹಿಳೆ ನೀಡಿದ್ದ ದೂರಿನನ್ವಯ ಅರುಣ್‍ನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಉನ್ನಿ ದಾಮೋದರನ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿವಾಹಿತರಾಗಿದ್ದ ಸಂತ್ರಸ್ತೆ ಪತಿಯ ನಿಧನದ ಬಳಿಕ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರು. ಕೇರಳದ ಪೆರಂಗೋಟ್ಟುಕ್ಕಾರ ದೇಗುಲದಲ್ಲಿ ಪೂಜೆ ಮಾಡಿಸಿದರೆ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಕೇಳಿ‌ ತಿಳಿದುಕೊಂಡು ತೆರಳಿದ್ದರು. ಆ ಸಂದರ್ಭದಲ್ಲಿ ಪರಿಚಯವಾಗಿದ್ದ ಅರ್ಚಕ ಅರುಣ್, “ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆ. ಪೂಜೆ ಮಾಡಬೇಕಿದೆ” ಎಂದು 24 ಸಾವಿರ ರೂ, ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ.

ಸಂತ್ರಸ್ತೆ ಬೆಂಗಳೂರಿಗೆ ಬಂದ ನಂತರ ಹಲವು ಬಾರಿ ವಾಟ್ಸ್​​ಆ್ಯಪ್​ನಲ್ಲಿ ವಿಡಿಯೋ ಕರೆ ಮಾಡಿದ್ದ ಆರೋಪಿ, ಬೆತ್ತಲಾಗುವಂತೆ ಒತ್ತಾಯಿಸಿದ್ದ. “ಇದೊಂದು ಪೂಜೆ, ನೀವು ಹೇಳಿದಂತೆ ಮಾಡದಿದ್ದರೆ ನಿಮ್ಮ ಮಕ್ಕಳಿಗೆ ಕೆಡುಕಾಗಲಿದೆ” ಎಂದು ಬೆದರಿಸಿದ್ದ. ಆತನ ಮಾತಿನಂತೆ ನಡೆದುಕೊಂಡಾಗ ಸಂತ್ರಸ್ತೆಯ ಬೆತ್ತಲೆ ದೃಶ್ಯಗಳನ್ನು ಆರೋಪಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಇಷ್ಟರ ಬಳಿಕ ವಿಶೇಷ ಪೊಜೆಗೆಂದು ಕೇರಳದ ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ದ. ಬರಲು ಸಾಧ್ಯವಿಲ್ಲ ಎಂದು ಸಂತ್ರಸ್ತೆ ಹೇಳಿದಾಗ, ಬೆತ್ತಲೆ ದೃಶ್ಯಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡಿರುವುದಾಗಿ ಬ್ಲ್ಯಾಕ್​ಮೇಲ್​​ ಮಾಡಲಾರಂಭಿಸಿದ್ದಾನೆ.

ಹೆದರಿದ್ದ ಮಹಿಳೆ ಕಳೆದ ತಿಂಗಳು ಆತ ಹೇಳಿದ ದೇಗುಲಕ್ಕೆ ತೆರಳಿದ್ದರು. ಆಕೆಯ ಬಳಿ ಪೂಜೆ ಮಾಡಿಸಿದ್ದ ಅರುಣ್ ಹಾಗೂ ಮುಖ್ಯ ಅರ್ಚಕ, ಧಾರ್ಮಿಕ ಕ್ರಿಯೆ ಇದೆ ಎಂದು ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಸ್ವಾಭಾವಿಕವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಮುಂದಾಗಿದ್ದ. ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಿ, ಬಿಟ್ಟು ಕಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರಿಗೆ ವಾಪಸಾಗಿದ್ದ ಸಂತ್ರಸ್ತೆ, ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದು ನಂತರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅರುಣ್‍ನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಉನ್ನಿ ದಾಮೋದರನ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.