
ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಕುಸಮಳ್ಳಿ ಗ್ರಾಮದ ಬಳಿ ತಾತ್ಕಾಲಿಕ ರಸ್ತೆಯ ಸೇತುವೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ಸಂಚಾರ ಮತ್ತೆ ಬಂದ್ ಆಗಿದೆ.
ಕುಸಮಳ್ಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ವಾಹನಗಳ ಸಂಚಾರಕ್ಕೆ ಅನುಕೂಲ ಆಗುವ ಉದ್ದೇಶದಿಂದ ಸೇತುವೆ ಕಾಮಗಾರಿ ಪಕ್ಕದಲ್ಲೆ ತಾತ್ಕಾಲಿಕವಾಗಿ ಸರ್ವೀಸ್ ರಸ್ತೆ ನಿರ್ಮಿಸಲಾಗಿತ್ತು.
ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಮಳೆರಾಯನ ಅರ್ಭಟಕ್ಕೆ ತಾತ್ಕಾಲಿಕ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಹಾಗಾಗಿ, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬೆಳಗಾವಿಯಿಂದ ಚೋರ್ಲಾ ಮಾರ್ಗವಾಗಿ ಗೋವಾಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತಿತ್ತು. ಈಗ ಗೋವಾಗೆ ಸಂಚರಿಸುವ ಪ್ರಯಾಣಿಕರು ರಾಮನಗರದ ಮೂಲಕ ಪ್ರಯಾಣಿಸಬೇಕಿದೆ.
ಕೆಲದಿನಗಳ ಹಿಂದೆ ಕೂಡ ಭಾರಿ ಮಳೆಯಿಂದ ಏಕಾಏಕಿ ನೀರು ಹೆಚ್ಚಳವಾಗಿ ಇದೇ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿತ್ತು. ಇದರಿಂದ ಬೆಳಗಾವಿಯಿಂದ ಚೋರ್ಲಾ ಮಾರ್ಗವಾಗಿ ಗೋವಾಗೆ ಸಂಚಾರ ಸ್ಥಗಿತಗೊಂಡಿತ್ತು.
