ಗಾಂಧಿನಗರ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ನವವರವೊಬ್ಬ ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಗುಜರಾತ್‌ನ ವಡೋದರಾದ ಭವಿಕ್ ಮಹೇಶ್ವರಿ (26) ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿದ್ದಾರೆ.
ಕೆಲ ವರ್ಷಗಳಿಂದ ಲಂಡನ್‌ನಲ್ಲಿಯೇ ವಾಸವಾಗಿದ್ದ ಭವಿಕ್ ಮಹೇಶ್ವರಿ ಜೂನ್ 10ರಂದು ರಿಜಿಸ್ಟರ್ ಮದುವೆ ಆಗಿದ್ದರು. ಮುಂದಿನ ಬಾರಿ ಲಂಡನ್‌ನಿಂದ ವಾಪಸ್ ಬಂದಾಗ ಸಂಭ್ರಮಾಚರಣೆಗೆ ನಿರ್ಧರಿಸಿದ್ದರು. ಭವಿಕ್, ಪ್ರತಿ ವರ್ಷ 15 ದಿನ ರಜೆ ಹಾಕಿ ಊರಿಗೆ ಬರುತ್ತಿದ್ದರು. ಈ ಬಾರಿಯೂ ಭವಿಕ್ ಊರಿಗೆ ಬಂದಿದ್ದರು. ಈ ವೇಳೆ ಮನೆಯವರು ಮದುವೆಯಾಗಿಯೇ ಹೋಗು ಎಂದು ಒತ್ತಾಯಿಸಿದ್ದರು.
ಮನೆಯವರ ಒತ್ತಾಯಕ್ಕೆ ಮಣಿದು ಭವಿಕ್, 2 ದಿನ ಮುನ್ನ ಸರಳವಾಗಿ ಮದುವೆಯಾಗಿದ್ದರು. ಭವಿಕ್, ಲಂಡನ್‌ಗೆ ತೆರಳಿದ ಮೇಲೆ ಪತ್ನಿಗೆ ವೀಸಾ ರೆಡಿ ಮಾಡಿ ಪತ್ನಿಯನ್ನು ಕರೆಸಿಕೊಳ್ಳಲು ಸಿದ್ಧರಾಗಿದ್ದರು. ಏರ್‌ಪೋರ್ಟ್ಗೆ ಬಂದು ಭವಿಕ್‌ರನ್ನು ಪತ್ನಿ ಬೀಳ್ಕೊಟ್ಟಿದ್ದರು.
ಪತ್ನಿ ವಾಪಸ್ ಮನೆ ತಲುಪುವ ಮುನ್ನವೇ ಪತಿಯ ಸಾವಿನ ಸುದ್ದಿ ಕೇಳಿಬಂದಿದ್ದು, ಭವಿಕ್ ಪತ್ನಿ ಹಾಗೂ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ವಿಧಿಯ ಕ್ರೂರ ಆಟಕ್ಕೆ ಆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭವಿಕ್ ದುರಂತ ಅಂತ್ಯಕಂಡಿದ್ದಾರೆ.
