
ಬೆಂಗಳೂರು, ಜೂನ್ 10: ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಡಿ ಅಧಿಕಾರಿಗಳಿಂದ ಸುಮಾರು 100 ಕೋಟಿ ರೂ ಮೌಲ್ಯದ 92 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಆಸ್ತಿ ಜಪ್ತಿ ಮಾಡಲಾಗಿದೆ. ಆ ಮೂಲಕ ಮುಡಾದಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ದೃಢಪಟ್ಟಿದೆ. ಸದ್ಯ ಮುಡಾ ಕೇಸ್ನ ತನಿಖೆ ಮುಂದುವರಿದಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಾರಿ ನಿರ್ದೇಶನಾಲಯ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ, 2002 ರ ನಿಬಂಧನೆಗಳ ಅಡಿಯಲ್ಲಿ 100 ಕೋಟಿ ರೂ. ಮೌಲ್ಯದ 92 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಇಡಿ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಐಪಿಸಿ, 1860 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಲೋಕಾಯುಕ್ತ ಪೊಲೀಸರು ಮೈಸೂರಿನಲ್ಲಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು. ಇದೀಗ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಬಗ್ಗೆ ಇಡಿ ಉಲ್ಲೇಖಿಸಿದೆ.
ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ವಿರುದ್ಧ ಆರೋಪ ಕೇಳಿಬಂದಿತ್ತು. ನಗದು, ಬ್ಯಾಂಕ್ ವರ್ಗಾವಣೆ, ಚರ, ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮ ಹಂಚಿಕೆ ಮಾಡಲು ಲಂಚ ಪಡೆದಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ತನಿಖೆಯ ಸಮಯದಲ್ಲಿ ಸಂಗ್ರಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
400 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಈ ಹಿಂದೆ 300 ಕೋಟಿ ಮೌಲ್ಯದ 160 ಆಸ್ತಿ ಮುಟ್ಟುಗೋಲು ಹಾಕಿದ್ದ ಇಡಿ, ಇದೀಗ ಮತ್ತೆ 100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದೆ. ಒಟ್ಟು 400 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇನ್ನೂ 800 ಸೈಟ್ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.
ಸಿಎಂ ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ: ಸ್ನೇಹಮಯಿ ಕೃಷ್ಣ
ಇತ್ತ ಬೆಂಗಳೂರಿನಲ್ಲಿ ಟಿವಿ9ಗೆ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದು, ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಮುಂದಿನ 3 ಅಥವಾ 4 ತಿಂಗಳಲ್ಲಿ ರಾಜ್ಯದ ಜನರಿಗೆ ಗೊತ್ತಾಗುತ್ತದೆ. ಪ್ರಕರಣದಲ್ಲಿ ಸಿದ್ದರಾಮಯ್ಯನವರಿಗೆ ಶಿಕ್ಷೆ ಆಗಿಯೇ ಆಗುತ್ತೆ ಎಂದು ಹೇಳಿದ್ದಾರೆ.
