
ಚಾಮರಾಜನಗರ: ದೇಶದ ಪ್ರಮುಖ ಹಾಗೂ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಬಂಡೀಪುರ ಅಭಯಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಇಬ್ಬರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.
ಬಂಡೀಪುರದ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರಿನ ಪಲ್ಲವಿ ಮತ್ತು ಘೋಷ್ ಎಂಬವರು, ಮಂಗಲ ರಸ್ತೆ ಬಳಿ ಕಾಡೊಳಗೆ ಕಾರಿನಲ್ಲಿ ತೆರಳಿ ಫೋಟೋಶೂಟ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಕಾಡಿನ ಹಾದಿಯಲ್ಲಿ ಫೋಟೋ ತೆಗೆಯುವುದು, ವಾಹನದಿಂದ ಕೆಳಕ್ಕಿಳಿಯುವುದು, ಪ್ರಾಣಿಗಳಿಗೆ ಆಹಾರ ಕೊಡುವುದು ದಂಡಾರ್ಹ ಅಪರಾಧ. ಇದರ ಅರಿವಿಲ್ಲದೇ ಫೋಟೋಶೂಟ್ ಕೂಡ ನಡೆಸಿದ್ದಾರೆ. ಫೋಟೋಶೂಟ್ ವಿಚಾರ ಗೊತ್ತಾಗಿ ಅಭಯಾರಣ್ಯಕ್ಕೆ ಅತಿಕ್ರಮಣ ಪ್ರವೇಶಿಸಿದ್ದ ಇಬ್ಬರಿಗೆ ವಿಧಿಸಿ, ಅರಣ್ಯ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಈ ಕುರಿತು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾಹಿತಿ ನೀಡಿದ್ದು, ಬೆಂಗಳೂರಿನ ಇಬ್ಬರಿಗೆ ದಂಡ ವಿಧಿಸಲಾಗಿದೆ. ಮಂಗಲ ರಸ್ತೆ ಸಮೀಪ ಕಾರಲ್ಲಿ ಕಾಡೊಳಗೆ ತೆರಳಿ ಫೋಟೋಶೂಟ್ ಮಾಡುತ್ತಿದ್ದುದು ತಿಳಿದು ಬಂದಿದ್ದರಿಂದ ಇಬ್ಬರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು 25 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ ಎಂದರು.
ಪ್ರವಾಸಿಗರು ಜವಾಬ್ದಾರಿ ಹಾಗೂ ಸಂಯಮದಿಂದ ವರ್ತಿಸುವಂತೆಯೂ ಅವರು ಮನವಿ ಮಾಡಿದ್ದಾರೆ.
