ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ

ರ್ನಾಟಕ ಹಾಗೂ ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಅದನ್ನು ಒಪ್ಪಲ್ಲ ಎಂದು ನಟಿ ಸುಧಾರಾಣಿ ಹೇಳಿದ್ದಾರೆ.

ನಟ ಕಮಲ್ ಹಾಸನ್ ಅವರ `ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ಹೇಳಿಕೆ ರಾಜ್ಯದಲ್ಲಿ ತ್ರೀವ ಆಕ್ರೋಶ ಹುಟ್ಟುಹಾಕಿದೆ. ಈ ಹೇಳಿಕೆ ಸಂಬಂಧ ಮಾತನಾಡಿದ ಅವರು, ನಮ್ಮ ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಆ ಸಮಯದಲ್ಲಿ ಖಂಡಿತವಾಗಿ ನಾವು ಎಲ್ಲರೂ ಒಟ್ಟಿಗೆ ನಿಂತೇ ನಿಲ್ಲುತ್ತೇವೆ. ನಮ್ಮ ಕನ್ನಡ ಭಾಷೆಯ ಬಗ್ಗೆ ದಾಖಲೆ ಇದೆ. ಅದನ್ನು ತೋರಿಸಿ ಅಂತಹವರಿಗೆ ತಿಳಿಹೇಳಬೇಕು. ಆದರೆ ಅವತ್ತು ಅಲ್ಲಿ ಏನು ನಡೆಯಿತು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ. ದಯವಿಟ್ಟು ಆ ಬಗ್ಗೆ ಕೇಳಬೇಡಿ, ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

ನಮ್ಮ ನಾಡು, ನುಡಿ ಬಗ್ಗೆ ಈ ರೀತಿ ಮಾತನಾಡಿದರೆ ಅದು ತಪ್ಪು. ಕಮಲ್ ಹಾಸನ್ ಅವರು ಕ್ಷಮೆ ಕೇಳಬಹುದು ನೋಡೋಣ ಎಂದು ಹೇಳಿದ್ದಾರೆ.

ಏನಿದು ವಿವಾದ?
ಮೇ 27ರಂದು `ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ಕುರಿತು ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಅವರು, ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಹೇಳಿದ್ದರು.

ಅದಾದ ಬಳಿಕ ಮತ್ತೆ ಮಾತನಾಡಿದ್ದ ಕಮಲ್ ಹಾಸನ್, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು