ದೆಹಲಿಯಲ್ಲಿ ಭಾರೀ ಮಳೆ – ವಿಮಾನ ಹಾರಾಟದಲ್ಲಿ ವ್ಯತ್ಯಯ

ನವದೆಹಲಿ: ದೆಹಲಿ ಮತ್ತು ಎನ್‌ಆರ್‌ಸಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಇಡೀ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಗಿದೆ.

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಸಿದ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ 100ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿದೆ. ಅಲ್ಲದೇ ಭಾರೀ ಮಳೆಗೆ 25ಕ್ಕೂ ಹೆಚ್ಚು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.

ದೆಹಲಿಯ ಮೋತಿ ಬಾಗ್, ಮಿಂಟೋ ರಸ್ತೆ, ದೆಹಲಿ ಕಂಟೋನ್ಮೆಂಟ್ ಮತ್ತು ದೀನ್ ದಯಾಳ್ ಉಪಾಧ್ಯಾಯ ಮಾರ್ಗಗಳು ಸಂಪೂರ್ಣ ಜಲಾವೃತವಾಗಿತ್ತು. ಮಹಿಪಾಲಪುರ ಮೇಲ್ಸೇತುವೆಯ ಕೆಳಗೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. 

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಮಳೆ ಪರಿಣಾಮ ಬೀರಿದೆ. ದೆಹಲಿಯ ಮೇಲಿನ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಕಾರ್ಯಾಚರಣೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿದೆ ಎಂದು ಇಂಡಿಗೋ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದೆ. 

ಇದೀಗ ಭಾರೀ ಮಳೆಗೆ ರಾಜಧಾನಿ ನವದೆಹಲಿ ಸೇರಿ ಹಲವೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.