Darshan thoogudeepa case: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು (ಏಪ್ರಿಲ್ 08) ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು. ಪವಿತ್ರಾ ಸೇರಿದಂತೆ ಹಲವು ಆರೋಪಿಗಳು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದರು. ಆದರೆ ದರ್ಶನ್ ಗೈರಾಗಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ದಿನ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು (ಏಪ್ರಿಲ್ 08) ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆಗೆ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇನ್ನೂ ಕೆಲವು ಆರೋಪಿಗಳು ಹಾಜರಾಗಿದ್ದರು. ಆದರೆ ನಟ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿದೆ. ‘ವಿಚಾರಣೆ ಇದ್ದಾಗ ಕಡ್ಡಾಯವಾಗಿ ಹಾಜರಾಗಬೇಕು’ ಎಂದಿದೆ.
ದರ್ಶನ್, ಬೆನ್ನು ನೋವಿನ ಕಾರಣ ನೀಡಿ ನ್ಯಾಯಾಲಯದ ವಿಚಾರಣೆಯಿಂದ ವಿನಾಯಿತಿ ಕೋರಿದ್ದರು. ಇತ್ತೀಚೆಗಷ್ಟೆ ‘ಡೆವಿಲ್’ ಸಿನಿಮಾದ ಶೂಟಿಂಗ್ಗಾಗಿ ನಟ ದರ್ಶನ್ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಸುಮಾರು 28 ಗಂಟೆಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ. ಇದರಿಂದಾಗಿ ಅವರಿಗೆ ಬೆನ್ನು ನೋವು ಉಲ್ಬಣವಾಗಿದ್ದ ಕಾರಣ ಇಂದು ವಿಚಾರಣೆಗೆ ಗೈರಾಗಿದ್ದರು. ಈ ವಿಷಯವನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಹೈಕೊರ್ಟ್ ಜಾಮೀನು ಷರತ್ತಿನಲ್ಲಿ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಅನುಮತಿ ನೀಡಿತ್ತು ಎಂದು ತಿಳಿಸಿ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದರು. ಆದರೆ ಸಮಜಾಯಿಷಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ವೇಳೆ ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದರು.
ಇಂದು ನಡೆದ ವಿಚಾರಣೆಗೆ ದರ್ಶನ್ ಒಬ್ಬರನ್ನು ಹೊರತುಪಡಿಸಿ ಇನ್ನುಳಿದ ಆರೋಪಿಗಳಾದ ಪವಿತ್ರಾ ಗೌಡ, ನಂದಿಶ್, ಜಗದೀಶ್, ನಾಗರಾಜ್, ವಿನಯ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್ ಕೇಶವ ಮೂರ್ತಿ ಇನ್ನೂ ಕೆಲವರು ಹಾಜರಾಗಿದ್ದರು. ಕೆಲವು ಆರೋಪಿಗಳು, ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್ಗಳನ್ನು ಮರಳಿಸಬೇಕು ಎಂದು ಮನವಿ ಸಲ್ಲಿಸಿದರು. ಬಳಿಕ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಯ್ತು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ದರ್ಶನ್ ಹಾಗೂ ಇನ್ನೂ ಕೆಲವರ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್, ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ.