
ಡಾಲಿ ಧನಂಜಯ್ ಹಾಗೂ ಧನ್ಯತಾ ವಿವಾಹ ಬಲು ಅದ್ಧೂರಿಯಾಗಿ ಮೈಸೂರು ನಗರಿಯಲ್ಲಿ ನಡೆಯುತ್ತಿದೆ. ಮೈಸೂರು ಅರಮನೆ ಮುಂಭಾಗದ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಹಾಗೂ ಧನ್ಯತಾ ವಿವಾಹ ಕಾರ್ಯ ಜರುಗುತ್ತಿವೆ. ಡಾಲಿ ಧನಂಜಯ್ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದ್ದು, ಅವರ ಜೊತೆಗೆ ಚಿತ್ರರಂಗದ ಗಣ್ಯರು, ರಾಜ್ಯದ ಪ್ರಮುಖ ರಾಜಕಾರಣಿಗಳು ಸಹ ಇಂದು (ಫೆಬ್ರವರಿ 15) ಆರತಕ್ಷತೆ ಮತ್ತು ನಾಳೆ (ಫೆಬ್ರವರಿ 16) ಮದುವೆಗೆ ಆಗಮಿಸಲಿದ್ದಾರೆ. ಇದಕ್ಕಾಗಿಯೇ ಡಾಲಿ ಮದುವೆಗೆಂದು ಬೃಹತ್ ಗಾತ್ರದ ಸೆಟ್ ಅನ್ನು ಹಾಕಲಾಗಿದೆ.
ಖ್ಯಾತ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆಗೆ ಎರಡು ಬೃಹತ್ ಸೆಟ್ ಹಾಕಿದ್ದಾರೆ. ಹಾಕಿರುವ ಸೆಟ್ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿರುವ ಅರುಣ್ ಸಾಗರ್, ‘ಡಾಲಿ ಧನಂಜಯ್ ಅವರ ಮದುವೆಗೆ ಎರಡು ರೀತಿಯ ಸೆಟ್ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲಿ ಮದುವೆ ನಡೆಯುತ್ತಿದ್ದು, ಸ್ವತಃ ಡಾಲಿ ಧನಂಜಯ್ಗೆ ಮೈಸೂರು ಮೆಚ್ಚಿನ ನಗರವಾದ್ದರಿಂದ ಮೈಸೂರನ್ನೇ ಥೀಮ್ ಆಗಿ ಇಟ್ಟುಕೊಂಡು ಸೆಟ್ ಡಿಸೈನ್ ಮಾಡಲಾಗಿದೆ’ ಎಂದಿದ್ದಾರೆ.
ಆರತಕ್ಷತೆಗೆ ಮೈಸೂರು ಅರಮನೆ, ಅರಮನೆಯ ಆರ್ಚ್ ಹಾಗೂ ಮೈಸೂರಿನ ಕಲೋನಿಯಲ್ ಬಿಲ್ಡಿಂಗ್ಗಳಿಂದ ಸ್ಪೂರ್ತಿ ಪಡೆದುಕೊಂಡು ಈ ಸೆಟ್ ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಆರತಕ್ಷತೆಯ ಸೆಟ್ಗೆ ಮೈಸೂರಿನ ಆರ್ಕಿಟೆಕ್ಚರ್ ಸ್ಪೂರ್ತಿ ನೀಡಿದೆ’ ಎಂದಿದ್ದಾರೆ ಅರುಣ್ ಸಾಗರ್. ಇನ್ನು ಮದುವೆಯ ಮಂಟಪಕ್ಕೂ ಭಿನ್ನವಾದ ಸೆಟ್ ಹಾಕಿದ್ದು, ದೇಗುಲಗಳ ಗೋಪುರಗಳ ಸೆಟ್ ಅನ್ನು ಅದಕ್ಕಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅರುಣ್ ಸಾಗರ್, ‘ಮೈಸೂರು, ದೇವನಗರಿಯೂ ಹೌದು. ಹಾಗಾಗಿ ಮಾಂಗಲ್ಯಧಾರಣೆಯಂಥಹಾ ಪ್ರಮುಖ ಕಾರ್ಯಕ್ಕೆ ಮೈಸೂರಿನ ದೇವಾಲಯಗಳ ಮಾದರಿಯಲ್ಲಿ ಗೋಪುರಗಳ ಸೆಟ್ಗಳನ್ನು ಅನ್ನು ನಿರ್ಮಾಣ ಮಾಡಲಾಗಿದೆ’ ಎಂದರು.
ಡಾಲಿಯ ಮದುವೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಧನು ವೆಡ್ಡಿಂಗ್ ಪ್ಲ್ಯಾನರ್ನ ಧನು ಮಾತನಾಡಿ, ‘ಡಾಲಿಯ ಮದುವೆಗೆ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹೆಚ್ಚಾಗಿ ಬರುತ್ತಾರೆ ಎಂಬುದು ಗೊತ್ತಿದ್ದ ಕಾರಣ ದೊಡ್ಡ ಜಾಗದಲ್ಲಿ ಮದುವೆ ಮಾಡಲು ನಿರ್ಧರಿಸಿದ್ದೆವು. ಮದುವೆ ಆಗುತ್ತಿರುವ ಎಕ್ಸಿಬಿಷನ್ ಗ್ರೌಂಡ್ 23 ಎಕರೆ ಇದೆ. ಅಷ್ಟೂ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಆರತಕ್ಷತೆ ಮಾಡುತ್ತಿರುವ ಜಾಗ ಒಂದು ಎಕರೆ ಇದೆ. ಮುಹೂರ್ತ ನಡೆಯುವ ಜಾಗ 43 ಸಾವಿರ ಚದರ ಅಡಿ ಇದೆ. ಊಟದ ಹಾಲ್ ಅನ್ನು ಮೂರು ಏಕರೆ ಜಾಗದಲ್ಲಿ ನಿರ್ಮಾಣ ಮಾಡಿದ್ದೀವಿ. ಪಾರ್ಕಿಂಗ್ಗಾಗಿ ದೊಡ್ಡ ಜಾಗವನ್ನು ಮೀಸಲಿಟ್ಟಿದ್ದೀವಿ. ವಿಐಪಿ ಪಾರ್ಕಿಂಗ್, ಅಭಿಮಾನಿಗಳಿಗೆ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.