
ಧಾರವಾಡ, ಜನವರಿ 24: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಬಿಎ ಪದವಿ ಪುಸ್ತಕದಲ್ಲಿನ ಪಠ್ಯದ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದ ಹಿನ್ನಲೆ ವಿವಾದಿತ ನಾಲ್ಕನೇ ಅಧ್ಯಾಯ ಕೈಬಿಟ್ಟು ಪಠ್ಯಪುಸ್ತಕ ಮುಂದುವರಿಕೆ ವಿವಿ ಮುಂದಾಗಿದ್ದು, ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಲಾಗಿದೆ.
ಆದೇಶದಲ್ಲೇನಿದೆ?
ಕರ್ನಾಟಕ ವಿಶ್ವವಿದ್ಯಾಲಯದ 2024-25 ಸಾಲಿನ ಕನ್ನಡ ಸ್ನಾತಕ ಪದವಿ ಬಿಎ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕ ಬೆಳಗು – 1ರಲ್ಲಿ ಪ್ರಕಟವಾಗಿದ್ದ ನಾಲ್ಕನೇ ಅಧ್ಯಾಯದ “ರಾಷ್ಟ್ರೀಯತೆಯ ಆಚರಣೆಯ ಸುತ್ತ” ಕುರಿತು ರಾಮಲಿಂಗಪ್ಪ 6 ಬೇಗೂರ ಅವರು ಬರೆದ ಲೇಖನದಲ್ಲಿ, ಕೆಲವು ಆಕ್ಷೇಪನಾರ್ಹ ಅಂಶಗಳನ್ನು ಒಳಗೊಂಡಿವೆ ಎಂಬ ವಿಷಯ ಮಾಧ್ಯಮ ಹಾಗೂ ಗಣ್ಯರಿಂದ ವ್ಯಕ್ತವಾಗಿದೆ..
ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಇಂದು ಈ ಲೇಖನವನ್ನು ನಿಯಮಾನುಸಾರ ವಿವಿಧ ಪ್ರಾಧಿಕಾರಗಳ ಸಭೆ ಜರುಗಿಸಿ ಸದರ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಕ್ರಮಜರುಗಿಸಲಾಗಿದೆ.
ಘಟಕ-1ರ ನಾಲ್ಕನೆಯ ಅಧ್ಯಾಯದ ಈ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವ ಕೈಬಿಟ್ಟು (ಹೊರತುಪಡಿಸಿ) ಬೆಳಗು-1 ಪಠ್ಯಪುಸ್ತಕವನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ತತ್ಸಮಂಭಂಧಿತ ಪೂರಕ ಕಾರ್ಯಗಳನ್ನು ಜಾರಿ ಮಾಡುವುದಾಗಿ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಠ್ಯ ವಿವಾದ: ಜ.29ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ
ಇನ್ನು ಪಠ್ಯ ವಿವಾದ ಹಿನ್ನೆಲೆ ಜ.29ರಂದು ನಡೆಯಬೇಕಿದ್ದ ಎನ್‌ಇಪಿ ಸೆಮಿಸ್ಟರ್-1 ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ವಿವಾದಿತ ಪಠ್ಯ ಬೆಳಗು-1 ಕೃತಿ ಆಧಾರಿತ ಪ್ರಶ್ನೆ ಪತ್ರಿಕೆವಾಗಿತ್ತು. ಆದರೆ ಬೆಳಗು-1 ಕೃತಿಯ ನಾಲ್ಕನೇ ಪಾಠ ವಿವಾದದ ಬೆನ್ನಲ್ಲಿಯೇ ಪಾಠ ವಾಪಸ್ ಪಡೆದಿದ್ದ ಕವಿವಿ, ಈಗ ಪರೀಕ್ಷೆ ಸಹ ಮುಂದೂಡಿದೆ.
ಬಿಎ, ಬಿಪಿಎ ಮ್ಯೂಸಿಕ್, ಬಿಎಫ್ಎ, ಬಿಎಸ್ಡಬ್ಲ್ಯೂ, ಬಿವಿಎ, BSc(ಹೋಮ್ ಸೈನ್ಸ್), ಬಿಟಿಟಿಎಂ ಈ ಎಲ್ಲಾ ಕೋರ್ಸ್‌ಗಳಿಗೆ ಬೆಳಗು-1 ಕೃತಿ ಸೇರಿತ್ತು. ಆದರೆ ಇದೀಗ ತಾಂತ್ರಿಕ ಕಾರಣದ ನೆಪ ಹೇಳಿ ಪರೀಕ್ಷೆ ಮುಂದೂಡಿಕೆ ಮಾಡಿ ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಿದ್ದು, ಮುಂದಿನ ದಿನಾಂಕ ನಂತರ ತಿಳಿಸುವುದಾಗಿ ಹೇಳಿದ್ದಾರೆ.
ಕುಲಪತಿ ಪ್ರೊ. ಜಯಶ್ರೀ ಹೇಳಿದ್ದಿಷ್ಟು
ಈ ಬಗ್ಗೆ ಧಾರವಾಡದಲ್ಲಿ ಕುಲಪತಿ ಪ್ರೊ. ಜಯಶ್ರೀ ಹೇಳಿಕೆ ನೀಡಿದ್ದು, ಈ ಬಗ್ಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ಸಮಿತಿಯವರು ವರದಿಯನ್ನು ಕೂಡ ಕೊಟ್ಟಿದ್ದಾರೆ. ಈಗಾಗಲೇ ನಾವು ಆ ಪಾಠವನ್ನು ಕೈಬಿಟ್ಟಿದ್ದೇವೆ. ಆ ಪಾಠ ಕೈಬಿಟ್ಟು ಪರೀಕ್ಷೆ ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ.
ಪುಸ್ತಕ ಸಮಿತಿ ಮೇಲೆ ಕ್ರಮ ಕೈಗೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಾವು ಸಿಂಡಿಕೇಟ್ ಸದಸ್ಯರ ಸಭೆ ಮಾಡುತ್ತೇವೆ. ಅದರಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
