ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಬರೋಬ್ಬರಿ 23 ಕೋಟಿ ರೂ ಮೌಲ್ಯದ ಗಾಂಜಾ ವಶ

ಬೆಂಗಳೂರು, ಜನವರಿ 16: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ತಂದಿದ್ದ 23 ಕೋಟಿ ರೂ. ಮೌಲ್ಯದ ಗಾಂಜಾವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಂಕಾಕ್​ನಿಂದ ಅಕ್ರಮವಾಗಿ 23 ಕೆಜಿ ಗಾಂಜಾ ತಂದಿದ್ದ ಮೂವರನ್ನು ಬಂಧಿಸಿದ್ದು, ಎನ್​ಡಿಪಿಎಸ್​ ಖಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.

ಬಂಧಿತ ಮೂವರು ಬ್ಯಾಂಕಾಕ್​ನಿಂದ ಅಕ್ರಮವಾಗಿ 23 ಕೆಜಿಯ ಹೈಡ್ರೋಪೋನಿಕ್ಸ್, ಮೈರವಾನ್ ಮತ್ತು ಹೂ ಸೇರಿದಂತೆ ವಿವಿಧ ಬಗೆಯ ಗಾಂಜಾವನ್ನು ಪ್ರತ್ಯೇಕ ಕವರ್ಗಳಲ್ಲಿ  ಪ್ಯಾಕಿಂಗ್ ಮಾಡಿಕೊಂಡು ಲಗೇಜ್ ಬ್ಯಾಗ್​ನಲ್ಲಿಟ್ಟುಕೊಂಡು ಕೆಐಎಬಿಗೆ ಬಂದಿದ್ದರು.

ಈ ವೇಳೆ ಕೆಂಪೇಗೌಡ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ಪರಿಶೀಲನೆ ವೇಳೆ ಗಾಂಜಾ ಸಮೇತ ಮೂವರನ್ನು ಬಂಧಿಸಿದ್ದಾರೆ. ಇನ್ನು ಹೈಡ್ರೋಪೋನಿಕ್ ಗಾಂಜಾ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಾಳುತ್ತದೆ ಎನ್ನಲಾಗಿದೆ.

ಅಂತಾರಾಜ್ಯ ಬೈಕ್​​ ಕಳ್ಳನ ಬಂಧನ: 5,15,000 ರೂ. ಮೌಲ್ಯದ 16 ಬೈಕ್ ಜಪ್ತಿ 

ಹಾವೇರಿಯಲ್ಲಿ ಅಂತಾರಾಜ್ಯ ಬೈಕ್​​ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. 5,15,000 ರೂ. ಮೌಲ್ಯದ 16 ಬೈಕ್ ಜಪ್ತಿ ಮಾಡಿದ್ದಾರೆ. ರಾಣೇಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮದ ನಿವಾಸಿ ಅಪ್ಪು‌ ನಾಗೇನಹಳ್ಳಿ(35) ಬಂಧಿತ ಆರೋಪಿ.

ಆರೋಪಿ ಜನಸಂದಣಿ ಪ್ರದೇಶದಲ್ಲಿ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕ್​​ಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಹೆಚ್ಚುವರಿ ಎಸ್​​ಪಿ ಎಲ್​​ವೈ ಶೀರಕೋಳ ಮತ್ತು ಸಂತೋಷ ಪವಾರ ನೇತೃತ್ವದಲ್ಲಿ ಬೈಕ್ ಕಳ್ಳನನ್ನು ಬಂಧಿಸಲಾಗಿದ್ದು, ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ ಹರಿದು ಬಾಲಕಿ ಸೇರಿ ಇಬ್ಬರು ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗೇಟ್​​ ಬಳಿ ಕೆಎಸ್​ಆರ್​ಟಿಸಿ ಬಸ್​ ಹರಿದು ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬೈಕ್ ಸವಾರ ವೆಂಕಟೇಶ್​ ಮೂರ್ತಿ(29), ಬಾಲಕಿ ಮೋಕ್ಷಿತಾ(8) ಮೃತರು. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೈಕ್​ನಲ್ಲಿದ್ದ ಲಾವಣ್ಯ, ನರಸಮ್ಮಗೆ ಗಾಯ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಊರಿನಿಂದ ಬೆಂಗಳೂರಿಗೆ ಬೈಕ್​​​​​​ನಲ್ಲಿ ನಾಲ್ವರು ತೆರಳುತ್ತಿದ್ದರು. ಬೈಕ್​​ ಅನ್ನು ಆಂಧ್ರ ಸಾರಿಗೆ ಬಸ್ ಓವರ್​ ಟೇಕ್​ ಮಾಡಿದ್ದು, ಈ ವೇಳೆ ಬಸ್​ ಟಚ್​ ಆಗಿ ಬೈಕ್​ನಲ್ಲಿದ್ದ ನಾಲ್ವರು ಬಿದಿದ್ದಾರೆ. ಹಿಂದಿನಿಂದ ಬರುತ್ತಿದ್ದ KSRTC ಬಸ್ ಹರಿದು ಇಬ್ಬರು ಮೃತಪಟ್ಟಿದ್ದಾರೆ. ಬಸ್​​​ಗಳ ಅತಿವೇಗವೇ​​​ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.