14 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ: ಮಗನ ಕನವರಿಸಿ ಕಣ್ಮುಚ್ಚಿದ ತಾಯಿ

ಮಂಗಳೂರು: ವ್ಯಕ್ತಿಯೊಬ್ಬ 14 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ ಭಾವನಾತ್ಮಕ ಕ್ಷಣಗಳಿಗೆ ನಗರದ ಸೇವಾ ಸಂಸ್ಥೆ ವೈಟ್ ಡೌಸ್‌ ಸಾಕ್ಷಿಯಾಯಿತು. ಶಿವಕುಮಾರ್(45) ಮರಳಿ ಕುಟುಂಬ ಸೇರಿದವರು.

2008ರಲ್ಲಿ ಛತ್ತೀಸ್‌ಗಢ ಮೂಲದ ಶಿವಕುಮಾರ್ ತನ್ನ ಕುಟುಂಬದೊಂದಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ದೆಹಲಿಗೆ ತೆರಳಿದ್ದರು. ಈ ವೇಳೆ ಶಿವಕುಮಾರ್​ ಅವರ ತಾಯಿ ಕಟ್ಟಡದ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ದುರ್ಘಟನೆಯ ಬಳಿಕ ಅವರ ಕುಟುಂಬ ಛತ್ತೀಸ್‌ಗಢಕ್ಕೆ ಮರಳಲು ನಿರ್ಧರಿಸಿ, ದೆಹಲಿಯ ರೈಲು ನಿಲ್ದಾಣದಿಂದ ಛತ್ತೀಸ್‌ಗಢಕ್ಕೆ ಪ್ರಯಾಣಿಸಿತ್ತು. ಆದರೆ ಶಿವಕುಮಾರ್​ ಕುಟುಂಬದಿಂದ ಬೇರ್ಪಟ್ಟಿದ್ದರು. ಆತನ ಕುಟುಂಬಸ್ಥರು ಮರಳಿ ದೆಹಲಿಗೆ ಬಂದು ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ.

ವೈಟ್‌ಡೌಸ್ ಸಂಸ್ಥೆಯ ಆಶ್ರಯ: 2010ರಲ್ಲಿ ಮಂಗಳೂರಿನ ಎಸ್.ಪಿ ಕಚೇರಿಯ ಬಳಿಯಿಂದ ಸ್ಥಳೀಯರೊಬ್ಬರು ವೈಟ್‌ಡೌಸ್ ಸಂಸ್ಥೆಗೆ ಕರೆ ಮಾಡಿ ನಿರ್ಗತಿಕ ವ್ಯಕ್ತಿಯೊಬ್ಬ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ವೈಟ್‌ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನ್ ರಸ್ಕಿನಾ ಅವರು, ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಶಿವಕುಮಾರ್​ನನ್ನು ಕರೆದಂತು ಆಶ್ರಯ ಕಲ್ಪಿಸಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಕಡಿಮೆ ಮಾತನಾಡುತ್ತಿದ್ದರು. ಆದರೆ, ಸಂಸ್ಥೆಯ ನಿರಂತರ ಆರೈಕೆ ಮತ್ತು ಔಷಧೋಪಚಾರದಿಂದ ಶಿವಕುಮಾರ್​ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಸುಮಾರು ಹದಿನಾಲ್ಕು ವರ್ಷದ ಬಳಿಕ ಶಿವಕುಮಾರ್ ತನ್ನ ಮನೆಯವರನ್ನು ನೆನಪು ಮಾಡಿಕೊಂಡು, ತನ್ನ ಚಿಕ್ಕಪ್ಪನ ಕುರಿತು ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಆಧರಿಸಿ ಹುಡುಕಿದಾಗ ಕುಟುಂಬ ಪತ್ತೆಯಾಗಿದೆ. ಶಿವಕುಮಾರ್​ ಇರುವ ಬಗ್ಗೆ ಮಾಹಿತಿ ಪಡೆದ ಕುಟುಂಬ ಛತ್ತೀಸ್​ಗಢದಿಂದ ಮಂಗಳೂರಿಗೆ ಬಂದಿದೆ. ಈ ವೇಳೆ ತನ್ನನ್ನು ಕಾಣಲು ಹಾತೊರೆಯುತ್ತಿದ್ದ ತಾಯಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟ ವಿಚಾರ ತಿಳಿದು ಶಿವಕುಮಾರ್ ಕಂಬನಿ ಮಿಡಿದರು.