ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಪಡೆದ ಮಾಜಿ ಸಿಎಂ ಯಡಿಯೂರಪ್ಪ

ದಕ್ಷಿಣ ಕನ್ನಡ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವನ್ನು ಭಾರೀ ಗೆಲುವಿನೆಡೆ ನಡೆಸಿದ ನಂತರ ಖುಷಿಯಿಂದ ಬೀಗುತ್ತಿರುವ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ದೇವರ ದರ್ಶನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಹಳ ದಿನಗಳ ನಂತರ ಧರ್ಮಸ್ಥಳಕ್ಕೆ ಬಂದಿದ್ದೇನೆ, ನಿನ್ನೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಹೇಳಿದರು. ರಾಜ್ಯ ಇನ್ನೂ ಬರಗಾಲದ ಛಾಯೆಯಲ್ಲಿದೆ, ಸಕಾಲದಲ್ಲಿ ಒಳ್ಳೆಯ ಮಳೆ ಬೆಳೆಯಾಗಲಿ, ರಾಜ್ಯದಲ್ಲಿ ಸುಭಿಕ್ಷೆ ತಲೆದೋರಲಿ, ಮುಂಬರುವ ದಿನಗಳು ರೈತರಿಗೆ ಮತ್ತು ನಾಡಿನ ಎಲ್ಲ ಜನರಿಗೆ ಒಳ್ಳೆಯದಾಗುವಂತೆ ಮಾಡೆಂದು ಮಂಜುನಾಥನಿಗೆ ಪ್ರಾರ್ಥಿಸಿಕೊಂಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.