ಬೆಂಗಳೂರು ಮಹರಾಣಿ ಕಾಲೇಜು ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಬೆಂಗಳೂರು, ಜೂನ್​ 18: ನಗರದ ಪ್ರತಿಷ್ಠಿತ ಮಹಾರಾಣಿ ಕಾಲೇಜಿನ ಹಾಸ್ಟೆಲ್​​ನಲ್ಲಿ ಓರ್ವ ವಿದ್ಯಾರ್ಥಿನಿ ಡೆತ್​ನೋಟ್​​ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಎಸ್​ಇ ಓದುತ್ತಿದ್ದ ಪಾವನಾ (19) ಮೃತ ದುರ್ದೈವಿ. ಮೃತ ಪಾವನಾ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್​ಸಿ ಓದುತ್ತಿದ್ದರು. ವಿದ್ಯಾರ್ಥಿನಿ ಪಾವನಾ ಜೂ.16 ರಂದು ಹಾಸ್ಟೆಲ್​ನ ರೂಂ‌ ನಂಬರ್ 17ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದು ರಾತ್ರಿ 11.30ರ ಸುಮಾರಿಗೆ ಗೆಳತಿಯರು ಪಾವನಾ ರೂಂನಲ್ಲಿ ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೆ ವಿದ್ಯಾರ್ಥಿನಿಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಈ ವಿಚಾರ ತಿಳಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆಹಾಕಿದರು. ಪೊಲೀಸರು ಪಾವನಾ ಡೆತ್​ ನೋಟ್​ ವಶಕ್ಕೆ ಪಡೆದು, ನೋಡಿದಾಗ ಪಾವನಾ ” ಆ್ಯಪ್​ವೊಂದರಲ್ಲಿ 15 ಸಾವಿರ ರೂ. ಹೂಡಿಕೆ ಮಾಡಿದ್ದು” ಉಲ್ಲೇಖವಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.