ಚಿತ್ರದುರ್ಗ : ಫೋಕ್ಸೋ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಅವರ ಜಾಮೀನನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ರದ್ದುಗೊಳಿಸುವ ಮೂಲಕ ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಇಂದು ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಮುರುಘಾ ಶ್ರೀ ಶರಣಾಗಿದ್ದಾರೆ. ವ್ಯಾನ್ನಲ್ಲಿ ಜೈಲಿಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮೇ 27ಕ್ಕೆ ವಿಚಾರಣೆ ನಿಗದಿಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಇತ್ತೀಚೆಗೆ ಜಾಮೀನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ಕೂಡ ನೀಡಿತ್ತು. ಜೊತೆಗೆ ವಿಶೇಷ ಕೋರ್ಟ್ನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆಗೆ ‘ಸುಪ್ರೀಂ’ ಆದೇಶಿಸಿತ್ತು. ಇನ್ನು 4 ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಬಂಧನದ ಅವಧಿಯನ್ನು ಇನ್ನೆರಡು ತಿಂಗಳ ಕಾಲ ವಿಸ್ತರಣೆ ಮಾಡಬಹುದಾಗಿದೆ.
2022ರ ಅಕ್ಟೋಬರ್ 13ರಂದು ಮುರುಘಾ ಸ್ವಾಮೀಜಿ ವಿರುದ್ಧ 2ನೇ ಪೋಕ್ಸೋ ಕೇಸ್ ದಾಖಲಾಗಿತ್ತು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆ ಎರಡನೇ ಪೋಕ್ಸೋ ಕೇಸ್ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿತ್ತು. ಎರಡೂ ಕೇಸ್ನಲ್ಲಿ ಸ್ವಾಮೀಜಿಗೆ ಜಾಮೀನು ಚಿತ್ರದುರ್ಗ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಜಾಮೀನಿಗಾಗಿ ಮುರುಘಾ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನಿಂದ 1ನೇ ಪೋಕ್ಸೋ ಕೇಸ್ನಲ್ಲಿ ಮುರುಘಾಶ್ರೀಗೆ ಬೇಲ್ ಸಿಕ್ಕಿತ್ತು. ನವೆಂಬರ್ 16 ರಂದು ಹೈಕೋರ್ಟ್ ಮುರುಘಾಶ್ರೀಗೆ 7 ಷರತ್ತುಗಳು ಹಾಕಿ ಜಾಮೀನು ನೀಡಿತ್ತು. ಬಂಧನವಾಗಿ ಬರೋಬ್ಬರಿ 441 ದಿನಗಳ ಬಳಿಕ ಮುರುಘಾ ಸ್ವಾಮೀಜಿ ರಿಲೀಸ್ ಆಗಿದ್ದರು. ಬಿಡುಗಡೆ ಬಳಿಕ ದಾವಣಗೆರೆಯ ವಿರಕ್ತ ಮಠದಲ್ಲಿ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು.