ಭರ್ಜರಿ ಗೆಲುವಿನ ಮೂಲಕ ಎನ್​​ಡಿಎ ಮತ್ತು ಬಿಜೆಪಿ ಚುನಾವಣೆ ಗೆದ್ದು ಬರಲಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ದೆಹಲಿ ಆಗಸ್ಟ್10: ಪ್ರತಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಸಭೆಗೆ ಆಗಮಿಸಿದ್ದು, ವಿಪಕ್ಷಗಳು ಕೇಂದ್ರ ಸರ್ಕಾರ ವಿರುದ್ಧ ಟೀಕಾ ಪ್ರಹಾರ ಮಾಡಿವೆ. ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ದೇಶದೊಳಗೆ ನಡೆಯುತ್ತಿರುವ ಆಂತರಿಕ ಕಲಹ ಎಂದು ಕರೆದಿದ್ದಾರೆ. ಮಣಿಪುರ ವಿಷಯದ ಬಗ್ಗೆ ಪ್ರಧಾನಿ ಮೌನವನ್ನು ವಿಪಕ್ಷಗಳು ಪ್ರಶ್ನಿಸಿದಾಗ, ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈಶಾನ್ಯ ರಾಜ್ಯದಲ್ಲಿ ನಡೆದ ಲೆಕ್ಕವಿಲ್ಲದಷ್ಟು ಘರ್ಷಣೆಗಳು ಮತ್ತು ಸಾವುಗಳನ್ನು ಸದನಕ್ಕೆ ನೆನಪಿಸಿದರು.

ಪ್ರತಿಪಕ್ಷಗಳು ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದರು. ಮೋದಿಯವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ಕಲಾಪದಲ್ಲಿ ಸದಸ್ಯರು ತಮ್ಮ ಅಭಿಪ್ರಾಯ ಹೇಳಿದ್ದಾರೆ.ದೇಶದ ಜನರು ನಮ್ಮ ಸರ್ಕಾರದ ಪರ ವಿಶ್ವಾಸ ಇಟ್ಟಿದ್ದಾರೆ.ದೇಶದ ಕೋಟಿ ಕೋಟಿ ಜನರಿಗೆ ಧನ್ಯವಾದ ಸಮರ್ಪಿಸುತ್ತೇನೆ.ನಮಗೆ ಭಗವಂತನ ಮೇಲೆ ಹೆಚ್ಚು ನಂಬಿಕೆ ಇದೆ. 2018ರಲ್ಲೂ ಕೂಡ ಈಶ್ವರನ ಆದೇಶ ಇತ್ತು. ವಿಪಕ್ಷ ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು,ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಕ್ಕೆ ಧನ್ಯವಾದಗಳು. ಇದು ನಮ್ಮ ಸರ್ಕಾರಕ್ಕೆ ಪರೀಕ್ಷೆ ಅಲ್ಲ, ವಿಪಕ್ಷಗಳಿಗೆ ಇರುವುದು. ವಿಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಶುಭವಾಗಲಿದೆ. 2024ರಲ್ಲಿ ಎನ್ ಡಿಎ ಹಾಗೂ ಬಿಜೆಪಿ ಗೆದ್ದು ಬರಲಿದೆ.ಎಲ್ಲ ದಾಖಲೆಗಳನ್ನು ಮುರಿದು ನಾನು ಗೆದ್ದು ಬರಲಿದ್ದೇವೆ.ಅಭೂತಪೂರ್ವ ಗೆಲುವಿನೊಂದಿಗೆ ನಾವು ಗೆದ್ದು ಬರಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ದೇವರು ತುಂಬಾ ಕರುಣಾಮಯಿ ಮತ್ತು ಆತ ಯಾವುದಾದರೂ ಮಾಧ್ಯಮದ ಮೂಲಕ ಮಾತನಾಡುತ್ತಾರೆ. ಪ್ರತಿಪಕ್ಷಗಳು ಈ ನಿರ್ಣಯವನ್ನು ತಂದಿರುವುದು ದೇವರ ಆಶೀರ್ವಾದ ಎಂದು ನಾನು ನಂಬುತ್ತೇನೆ. ನಾನು 2018 ರಲ್ಲಿ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅದು ಮಂಡನೆಯಲ್ಲ ಎಂದು ಹೇಳಿದ್ದೆ. ನಮಗೆ ಅದು ಪರೀಕ್ಷೆ ಆಗಿರಲಿಲ್ಲ ಆದರೆ ಅವರಿಗೆ ಆಗಿತ್ತು. ಪರಿಣಾಮ ಅವರು ಚುನಾವಣೆಯಲ್ಲಿ ಸೋತರು.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ ದೊಡ್ಡ ವೈಫಲ್ಯ

ಇಂದು ಬೆಳಗ್ಗೆ ಆಡಳಿತಾರೂಢ ಸರ್ಕಾರದ ಮೇಲೆ ತೀವ್ರ ಟೀಕಾ ಪ್ರಹಾರ ಮಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ “ದೊಡ್ಡ ವೈಫಲ್ಯ” ಎಂದು ಹೇಳಿದರು. ಕೇಂದ್ರದ “ಮಣಿಪುರದಲ್ಲಿ ಮೌನ ಸಂಹಿತೆ”ಯನ್ನು ಕೊನೆಗೊಳಿಸುವುದು ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಗುರಿಯಾಗಿದೆ. ಈ ನಿರ್ಣಯವು ಮಣಿಪುರದಲ್ಲಿ ಈ ಮೌನ ಸಂಹಿತೆಯನ್ನು ಮುರಿಯುವುದಾಗಿದೆ. ಪ್ರಧಾನಿ ಮೋದಿ ನಮ್ಮ ಮಾತು ಕೇಳುವುದಿಲ್ಲ, ಕೊನೆಯ ದಿನ ಬಂದು ಭಾಷಣ ಮಾಡುತ್ತಾರೆ. ನಮ್ಮ ಪ್ರಧಾನಿ ಸಂಸತ್ತಿಗೆ ಬರಲು ನಿರಾಕರಿಸುತ್ತಾರೆ ಅಥವಾ ಅವರು ಮಣಿಪುರಕ್ಕೆ ಹೋಗಲು ನಿರಾಕರಿಸುತ್ತಾರೆ. ಇದಕ್ಕಿಂತ ಹೆಚ್ಚು ದುರದೃಷ್ಟಕರ ಸಂಗತಿ ಏನೆಂದು ನನಗೆ ತಿಳಿದಿಲ್ಲ ಎಂದಿದ್ದೆ ಮಹುವಾ ಮೊಯಿತ್ರಾ.

ಅವಿಶ್ವಾಸ ನಿರ್ಣಯವು ಪ್ರಧಾನಿ ಮೋದಿಯನ್ನು ಸಂಸತ್ತಿಗೆ ಬರುವಂತೆ ಮಾಡಿತು: ಅಧೀರ್ ರಂಜನ್ ಚೌಧರಿ

ಇಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಷಣದ ಮೊದಲು ಮಾತನಾಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಅವಿಶ್ವಾಸ ನಿರ್ಣಯದ ಶಕ್ತಿಯೇ ಇಂದು ಪ್ರಧಾನಿಯನ್ನು ಸಂಸತ್ತಿಗೆ ಕರೆತಂದಿದೆ. ಈ ಅವಿಶ್ವಾಸ ನಿರ್ಣಯದ ಬಗ್ಗೆ ನಾವೇನೂ ಯೋಚಿಸಿರಲಿಲ್ಲ. ಪ್ರಧಾನಿ ಮೋದಿಯವರು ಸಂಸತ್ತಿಗೆ ಬಂದು ಮಣಿಪುರ ವಿಷಯದ ಬಗ್ಗೆ ಮಾತನಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೆವು. ನಾವು ಯಾವುದೇ ಬಿಜೆಪಿ ಸದಸ್ಯರನ್ನು ಸಂಸತ್ತಿಗೆ ಬರುವಂತೆ ಒತ್ತಾಯಿಸುತ್ತಿರಲಿಲ್ಲ, ನಮ್ಮ ಪ್ರಧಾನಿ ಬರುವಂತೆ ನಾವು ಒತ್ತಾಯಿಸುತ್ತಿದ್ದೆವು ಎಂದಿದ್ದಾರೆ.

ಪ್ರತಿಪಕ್ಷಗಳ ಘೋಷಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಆಗಮಿಸುತ್ತಿದ್ದಂತೆ, ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ, ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ದೇಶದಲ್ಲಿನ ಆಂತರಿಕ ಕಲಹ ಎಂದು ಕರೆದರು. ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದರು. ಆದರೆ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳ ಬಗ್ಗೆ ಹೇಳಿಕೆ ನೀಡಲು ಅವರಿಗೆ ಸಮಯ ಇರಲಿಲ್ಲ ಎಂದಿದ್ದಾರೆ.